ವಿಜಯಪುರ: ಕೇಂದ್ರ ಸಚಿವ ಸುರೇಶ ಅಂಗಡಿ ನಿಧನ ನಂತರ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಒಂದು ಅವಕಾಶ ನೀಡಿ ಎಂದು ಬಿಜೆಪಿಯ ಹಿರಿಯ ಮುಖಂಡರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.
ಹಿಂದುತ್ವ ಹಾಗೂ ಅಭಿವೃದ್ಧಿ ಮುಂದೆ ಇಟ್ಟುಕೊಂಡು ಉಪಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ. ಏಕೆಂದರೆ ಮುಂದಿನ ಸಾರ್ವತ್ರಿಕ ಲೋಕಸಭೆ ಚುನಾವಣೆ ಇನ್ನೂ 3 ವರ್ಷ ಬಾಕಿ ಇದೆ. ಹೀಗಾಗಿ ಉಪಚುನಾವಣೆ ಅಧಿಕಾರವಧಿವರೆಗೆ ಉತ್ತಮ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇನ್ನೇನಿದ್ದರೂ ಪಕ್ಷದ ಟಿಕೆಟ್ ಯಾರಿಗೆ ನೀಡುತ್ತಾರೆ ಎಂದು ಕಾಯುತ್ತೇನೆ ಎಂದರು.
ಪಕ್ಷದಿಂದ ಟಿಕೆಟ್ ದೊರೆಯದಿದ್ದರೆ ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವದಿಲ್ಲ. ಪಕ್ಷ ಬಯಸಿದರೆ ಮೋದಿಗಾಗಿ ಬಿಜೆಪಿ ಪರ ಪ್ರಚಾರ ಮಾಡಲು ಸಿದ್ದನಿದ್ದೇನೆ ಎಂದರು.
ಮಾಜಿ ಸಿಎಂಗಳಿಂದ ರಾಮಭಕ್ತರಿಗೆ ಅವಮಾನ
ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಾಡಿದ ಆರೋಪ ರಾಮನ ಭಕ್ತರಿಗೆ ಅವಮಾನ ಮಾಡಿದಂತಾಗಿದೆ. ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಲು ಹೋಗಿ ದೇಶದ 130 ಕೋಟಿ ರಾಮಭಕ್ತರಿಗೆ ಅವಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿಯೇ ರಾಮನಿದ್ದಾನೆ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ್, ಈ ರೀತಿ ಮೀಸಲಾತಿ ಗೊಂದಲ ಹುಟ್ಟಿಸುತ್ತದೆ ಎಂದು ಡಾ. ಅಂಬೇಡ್ಕರ್ ಮೀಸಲಾತಿಯನ್ನು 10 ವರ್ಷದವರೆಗೆ ಮಾತ್ರ ಸೀಮಿತಗೊಳಿಸಿದ್ದರು ಎಂದರು.
ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆಗಳು ಖಾಲಿ ಖಾಲಿ.. ತುಂಬೋದ್ಯಾವಾಗ, ಒತ್ತಡ ತಗ್ಗೋದ್ಯಾವಾಗ!?