ಮುದ್ದೇಬಿಹಾಳ: ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಲು ಯುವಕನೊಬ್ಬ ಬರೋಬ್ಬರಿ 3,350 ಕಿ.ಮೀ ಪಾದಯಾತ್ರೆ ಪ್ರಾರಂಭಿಸಿದ್ದಾನೆ.
ಬಾಗಲಕೋಟೆ ಮೂಲದ ನಾಗೇಶ್ ಕಲಕುಟಗರ್ ಪಾದಯಾತ್ರೆ ನಡೆಸುತ್ತಿರುವ ಯುವಕ. ಈತ ಮೂಲತಃ ಬಾಗಲಕೋಟೆಯವನಾಗಿದ್ದು, ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಸುಮಾರು 3,350 ಕಿಲೋ ಮೀಟರ್ ಪಾದಯಾತ್ರೆ ನಡೆಸಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿಯಾಗಲು ಮುಂದಾಗಿದ್ದಾನೆ.
ಈಗಾಗಲೇ ಪಾದಯಾತ್ರೆ ಮೂಲಕ ಕರ್ನಾಟಕದ 30 ಜಿಲ್ಲೆ ಮುಕ್ತಾಯಗೊಳಿಸಿ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿದ್ದು, ನಂತರ ದೆಹಲಿಯತ್ತ ಸಾಗಲಿದ್ದಾರೆ. ಮುದ್ದೇಬಿಹಾಳ ಮಾರ್ಗದಲ್ಲಿ ಸಾಗುತ್ತಿದ್ದ ನಾಗೇಶ್ ಕಲಕುಟಗರ್ ಅವರನ್ನು ಮುದ್ದೇಬಿಹಾಳದ ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಸಲಾಂ ಭಾರತ್ ಟ್ರಸ್ಟ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಾಜೀದ್ ಶಾ ಹಡಲಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಬೂಬ್ ಆರ್ ಕೆ, ಅಬ್ದುಲ್ ಗಫ್ಫಾರ ಬಾಗವಾನ್ ಉಪಸ್ಥಿತರಿದ್ದರು.