ವಿಜಯಪುರ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಡೋಣಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಡೋಣಿ ನದಿಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಇದೇ ವೇಳೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದ ಬಳಿ ಸೇತುವೆ ಕೊಚ್ಚಿಕೊಂಡು ಹೋಗಿದ್ದು,ಯರಿಝರಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ.
ಡೋಣಿ ನದಿಯಲ್ಲಿ ಪ್ರವಾಹ ಸಾಧ್ಯತೆ : ಇಲ್ಲಿನ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನಿನ್ನೆ ರಾತ್ರಿಯವರೆಗೆ ಜಿಲ್ಲೆಯಲ್ಲಿ ಒಟ್ಟು 11.54 ಮೀ.ಮೀಟರ್ ಮಳೆ ದಾಖಲಾಗಿದೆ. ಡೋಣಿ ನದಿ ಹರಿಯುವ ಬಬಲೇಶ್ವರ ತಾಲೂಕಿನಲ್ಲಿ 3.0 ಮೀ.ಮೀಟರ್ ಮಳೆ, ತಾಳಿಕೋಟೆಯಲ್ಲಿ 7.75 ಮೀ.ಮೀಟರ್, ತಿಕೋಟಾ ತಾಲೂಕಿನಲ್ಲಿ 9.1 ಮೀ.ಮೀಟರ್ ಮಳೆಯಾಗಿದೆ. ಹೀಗಾಗಿ ಈ ಸಲ ಮೂರನೇ ಬಾರಿ ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಮಳೆ ನೀರು ಜಮೀನಿಗೆ ನುಗ್ಗಿ ಬೆಳೆಗಳಿಗೆ ಹಾನಿ : ಡೋಣಿ ನದಿಯ ಸೇತುವೆಗಳು ಬಹುತೇಕ ಜಲಾವೃತವಾಗಿದೆ. ವಾಹನ ಸವಾರರು ಅಪಾಯದಲ್ಲಿ ಸೇತುವೆ ದಾಟುತ್ತಿದ್ದಾರೆ. ಸದ್ಯ ಡೋಣಿ ನದಿಯಲ್ಲಿ ನೀರು ಏರಿಕೆಯಾಗುತ್ತಿದ್ದು, ತಿಕೋಟಾ, ಬಬಲೇಶ್ವರ ತಾಲೂಕಿನ ಭಾಗದಲ್ಲಿ ನದಿಪಾತ್ರದ ಹೊಲಗಳಿಗೆ ನೀರು ನುಗ್ಗುತ್ತಿವೆ. ಇದರಿಂದ ರೈತರಿಗೆ ತಾವು ಬೆಳೆದ ಮೆಕ್ಕೆಜೋಳ, ಹತ್ತಿ ಹಾಗೂ ತೊಗರಿ ಬೆಳೆಗಳು ಮಳೆಗೆ ಆಹುತಿಯಾಗುವ ಭೀತಿ ಎದುರಾಗಿದೆ.
ಈ ಬಾರಿಯ ಮಳೆಗೆ ಹಿಂಗಾರು ಬಿತ್ತನೆ ಮಾಡಿದ ಜಮೀನುಗಳೂ ಜಲಾವೃತವಾಗಿದ್ದು, ಈ ಬೆಳೆಯೂ ನೆಲಕಚ್ಚುವ ಭೀತಿ ಎದುರಾಗಿದೆ. ಹಿಂದೆ ಮುಂಗಾರು ಬೆಳೆಗಳು ಮಳೆ ಹಾಗೂ ಪ್ರವಾಹದಿಂದ ಹಾಳಾಗಿದ್ದವು. ಇದೀಗ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳೂ ನಾಶವಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ :ರಾಜ್ಯದಲ್ಲಿ 41.8 ಸಾವಿರ ಹೆಕ್ಟೇರ್ ಭೂಮಿ ಸವಳು ಜವಳು: ಮಣ್ಣಿನ ಆರೈಕೆಗೆ ಮುಂದಾದ ಕೃಷಿ ಇಲಾಖೆ