ವಿಜಯಪುರ: ವಿಜಯಪುರದಲ್ಲಿ ಮಳೆ ಮುಂದುವರಿದಿದ್ದು ಜಿಲ್ಲೆಯ ಜನರು ನಲುಗಿದ್ದಾರೆ. ಕಳೆದ 24ಗಂಟೆಯಲ್ಲಿ ಜಿಲ್ಲೆಯಲ್ಲಿ 1.31 ಮೀಲಿ ಮೀಟರ್ ಮಳೆಯಾಗಿದ್ದು, 15ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಬಿಜ್ಜಳ ಹೆದ್ದಾರಿ ಬಂದ್: ಡೋಣಿ ನದಿ ನೀರಿನ ಹರಿವು ಹೆಚ್ಚಾಗುತ್ತಿದೆ. ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ. ತಾಳಿಕೋಟೆ ಪಟ್ಟಣದ ಕೆಳಸೇತುವೆ ಮತ್ತೆ ಜಲಾವೃತವಾಗಿದ್ದು, ಬಿಜ್ಜಳ ಹೆದ್ದಾರಿ-61ರಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ವಿಜಯಪುರದಿಂದ ತಾಳಿಕೋಟೆ, ಸುರಪುರ, ರಾಯಚೂರು, ಯಾದಗಿರಿ, ಕಲಬುರಗಿಗೆ ಸಂಪರ್ಕ ಕಲ್ಪಿಸುವ ಬಿಜ್ಜಳ ಹೆದ್ದಾರಿ ಬಂದ್ ಆಗಿದೆ.
ಸೇತುವೆ ಮೇಲೆ ನಿಂತ ನೀರು: ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿಯ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತವಾಗಿದೆ. ದೇವರಹಿಪ್ಪರಗಿ ಬಸವನಬಾಗೇವಾಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ 41ರ ಸಂಚಾರ ಬಂದ್ ಆಗಿದೆ.
ಕೃಷಿಭೂಮಿ ಜಲಾವೃತ: ಸಾವಿರಾರು ಎಕರೆ ಜಮೀನು ಜಲಾವೃತವಾಗಿದ್ದು, ಈರುಳ್ಳಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೆಲಕಚ್ಚಿವೆ. ಬಬಲೇಶ್ವರ ತಾಲೂಕಿನ ತೋನಸ್ಯಾಳ ಗ್ರಾಮವೊಂದರಲ್ಲೇ 3 ಸಾವಿರ ಎಕರೆ ಜಮೀನು ಜಲಾವೃತವಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
ಡಿಸಿ ಭೇಟಿ: ದೋಣಿ ನದಿ ತುಂಬಿ ಹರಿಯುತ್ತಿದ್ದು, ಸಾರವಾಡ, ದನ್ಯಾಳ ಮತ್ತು ದಾಸ್ಯಾಳ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯರ ಸಮಸ್ಯೆ ಆಲಿಸಿದ ಡಿಸಿ: ಮೊದಲಿಗೆ ಸಾರವಾಡ ಗ್ರಾಮಕ್ಕೆ ತೆರಳಿ ನದಿ ನೀರಿನಿಂದಾಗಿ ಆ ಗ್ರಾಮದ ರಸ್ತೆಗಳ ಮೇಲೆ ನೀರು ಹರಿಯುತ್ತಿರುವದನ್ನು ಗಮನಿಸಿದರು. ಬಳಿಕ ದನ್ಯಾಳ ಮತ್ತು ದಾಸ್ಯಾಳ ಗ್ರಾಮಕ್ಕೆ ಭೇಟಿ ನೀಡಿದರು. ನೀರು ರಭಸವಾಗಿ ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿರುವುದನ್ನು ಸಹ ವೀಕ್ಷಣೆ ನಡೆಸಿದರು. ಮನೆಗಳಿಗೆ ಹಾನಿ, ಬೆಳೆಹಾನಿ ಕುರಿತು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಹಾನಿ, ಎರಡು ತಿಂಗಳಲ್ಲಿ 70 ಜನ ಸಾವು: 2 ಹೆಚ್ಚುವರಿ ಎಸ್ಡಿಆರ್ಎಫ್ ತಂಡ ರಚನೆಗೆ ಸಿಎಂ ಸೂಚನೆ
ಮತ್ತೆ ಮಳೆಯಿಂದಾಗಿ ನದಿ ತುಂಬಿ, ನದಿ ಅಂಚಿನ ಗ್ರಾಮಗಳಿಗೆ ನೀರು ಹೊಕ್ಕಲ್ಲಿ ಪೈಪ್ ಮೂಲಕ ನೀರನ್ನು ಹೊರಸಾಗಿಸುವ ಕಾರ್ಯ ನಡೆಸಲು ಸದಾ ಕಾಲ ಸನ್ನದ್ಧರಾಗಿರುವಂತೆ ತಾಪಂ ಇಓ ಅವರಿಗೆ ಸೂಚಿಸಿದರು. ಪ್ರವಾಹದಿಂದಾಗಿ ಬೆಳೆಹಾನಿಯಾದ ಬಗ್ಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಜಂಟಿ ಸಮೀಕ್ಷೆ ನಡೆಸಿ, ಬೆಳೆಹಾನಿ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಬಳಿಕ ತಿಕೋಟಾ ತಾಲೂಕಿಗೂ ಭೇಟಿ ನೀಡಿದರು. ಕೋಟ್ಯಾಳ, ಹರನಾಳ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಬಲೇಶ್ವರ ತಹಶೀಲ್ದಾರ, ತಾ.ಪಂ ಇಒ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.