ವಿಜಯಪುರ: ಮಹಾರಾಷ್ಟ್ರ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಜೀವನಾಡಿ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಾರಣ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸೋಮವಾರ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಜಲಾಶಯಕ್ಕೆ ಬರುವ ಒಳಹರಿವು ಹೆಚ್ಚಾಗಿದ್ದು, ಸದ್ಯ127582 ಕ್ಯೂಸೆಕ್ ನೀರು ಹರಿದು ಬಂದಿದೆ. ಈಗ ಜಲಾಶಯದ ಮಟ್ಟ 518.80 ಮೀಟರ್ ಇದ್ದು, ನೀರಿನ ಸಂಗ್ರಹ 109.755 ಟಿಎಂಸಿ ಇದೆ. ಸದ್ಯ ಜಲಾಶಯದ ಎಲ್ಲಾ 26 ಕ್ರಸ್ಟ್ ಗೇಟ್ಗಳಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ಈ ಸಲ ಎರಡನೇ ಬಾರಿ ಹೆಚ್ಚಿನ ನೀರನ್ನು ಹೊರ ಬಿಡಲಾಗಿದೆ.
ಸದ್ಯ ನಾರಾಯಣಪುರದ ಹಿನ್ನೀರಿನ ಪ್ರದೇಶದ ಗ್ರಾಮದ ಮಟ್ಟಕ್ಕೆ ನೀರು ಬಂದಿದೆ. ಹಾಗೆಯೇ 3-4 ದಿನ ಜಲಾಶಯಕ್ಕೆ ಹೆಚ್ಚುವರಿ ನೀರು ಹರಿದು ಬಂದರೆ ಅನಿರ್ವಾಯವಾಗಿ ಜಲಾಶಯದಿಂದ ಅದೇ ಪ್ರಮಾಣದಲ್ಲಿ ನೀರನ್ನು ಹೊರಬಿಡಬೇಕು. ಇದರಿಂದ ಜಿಲ್ಲೆ ಕೆಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎನ್ನಲಾಗುತ್ತಿದೆ.
ಶಾಶ್ವತ ಪರಿಹಾರಕ್ಕೆ ಕ್ರಮ:
ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುತ್ತಿರುವ ನೀರಿನ ಪ್ರಮಾಣ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಸದ್ಯ ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ಹೊರಹರಿವು ಇರುವ ಕಾರಣ ಕೆಲ ಗ್ರಾಮದ ಹೊಲಗಳಿಗೆ ನೀರು ನುಗ್ಗಿರುವ ಮಾಹಿತಿ ಇದೆ. ಜಲಾಶಯದ ಒಳಹರಿವು ಕಡಿಮೆಯಾದರೆ ಹೊರಹರಿವು ಕಡಿಮೆ ಮಾಡಿ ಆ ಪ್ರದೇಶಗಳನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಆಕಸ್ಮಿಕವಾಗಿ ಪ್ರವಾಹ ಬಂದರೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಿದೆ. ಆದರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಹಿಂದಿನ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.