ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಕ್ಕಾಗಿ ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಅನೇಕರಿಗೆ ರಕ್ತದಲ್ಲಿ ಪತ್ರ ಬರೆದಿದ್ದ ಸ್ಥಳೀಯ ಶಿಕ್ಷಣ ಪ್ರೇಮಿಯ ಬೇಡಿಕೆ ಕೊನೆಗೂ ಈಡೇರಿದೆ. ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಇವರ ಹೆಸರು ನಿರಂಜನ್ ಜೋಶಿ. ನಾಲತವಾಡ ಪಟ್ಟಣದ ನಿವಾಸಿ. ಈ ಶಿಕ್ಷಣ ಪ್ರೇಮಿಯ ಸತತ ಪ್ರಯತ್ನದಿಂದ ಪಟ್ಟಣದಲ್ಲಿ ಪದವಿಪೂರ್ವ ಕಾಲೇಜು ಆರಂಭಕ್ಕೆ ಆದೇಶ ಹೊರಬಿದ್ದಿದೆ. ಇದರ ಜತೆಗೆ ರಾಜ್ಯದಲ್ಲಿ ಒಟ್ಟು 46 ಪ.ಪೂ ಕಾಲೇಜುಗಳ ಮಂಜೂರಾತಿಗೆ ಸರ್ಕಾರ ಆದೇಶ ನೀಡಿದೆ.
ಹೀಗಿದೆ ನಿರಂಜನ್ ಜೋಶಿ ರಕ್ತ ಪತ್ರ ವ್ಯವಹಾರ: ಇವರು ಕಳೆದ ಐದು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಹೈಸ್ಕೂಲ್, ಪಿಯು, ಡಿಗ್ರಿ ಕಾಲೇಜು ಸ್ಥಾಪನೆಗಾಗಿ ಆಗಿನ ಶಾಸಕ ಸಿ.ಎಸ್ ನಾಡಗೌಡ, ಡಿಸಿ, ಡಿಡಿಪಿಯುಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
- ಬಳಿಕ 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದು ವಿನಂತಿಸಿದ್ದರು.
- ಆರು ತಿಂಗಳ ನಂತರ ಪ್ರಧಾನಿ ಕಚೇರಿಯಿಂದ ಕಾಲೇಜು ಆರಂಭಿಸುವ ಭರವಸೆ ದೊರೆತು ಪತ್ರ ಬಂದಿದ್ದು, ಸಿಎಂ ಕಚೇರಿಯಿಂದ ಪರಿಶೀಲಿಸಲಾಗುವುದು ಎಂಬ ಉತ್ತರ ಸಿಕ್ಕಿತ್ತು.
- ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಪ್ಪಿಸಲು ಹಾಗೂ ಬಡ ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ರಕ್ತ ಪತ್ರ ವ್ಯವಹಾರ ಶುರು ಮಾಡಿದ್ದರು.
- ಕಾಲೇಜು ಆರಂಭಿಸುವಂತೆ ಪ್ರಧಾನಿಯವರಿಗೆ ರಕ್ತದಲ್ಲಿ 10 ಪುಟಗಳ ಪತ್ರ ಬರೆದು ಮನವಿ ಮಾಡಿಕೊಂಡರು. ಆದರೆ ಕೊರೊನಾ ಕಾರಣದಿಂದ ಕಾಲೇಜು ಆರಂಭಕ್ಕೆ ಹಿನ್ನಡೆಯಾಯಿತು.
- ಸದ್ಯ ರಾಜ್ಯ ಸರ್ಕಾರ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ತೋರಿಸಿದೆ.
ಪಟ್ಟಣದ ಮಕ್ಕಳ ಕಾಲೇಜು ಶಿಕ್ಷಣಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪಾಲಕರಿಗೆ ಈ ವಿಚಾರ ಹರ್ಷವನ್ನುಂಟು ಮಾಡಿದೆ. ನಿರಂಜನ ಅವರ ಹೋರಾಟಕ್ಕೆ ಜಯ ದೊರೆತಿದ್ದು, ಪಟ್ಟಣಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ನಮ್ಮ ನಾಲತವಾಡ ಪಟ್ಟಣದಲ್ಲಿ ಕಾಲೇಜು ಪ್ರಾರಂಭಿಸುವುದರಿಂದ ನಮ್ಮ ಮಕ್ಕಳು ನಮ್ಮ ಊರಲ್ಲೇ, ನಮ್ಮ ಕಣ್ಮುಂದೆ ಕಲಿಯಲು ಅನುಕೂಲವಾಗುತ್ತದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.
ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿ ತಪ್ಪಿಸಲು ಹಾಗೂ ಬಡ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಸತತವಾಗಿ ತಮ್ಮ ರಕ್ತದಿಂದ ಪತ್ರ ಬರೆದು ಯಶಸ್ಸು ಕಂಡಿರುವ ಯುವಕನಿಗೆ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಸಾಮಾಜಿಕ ಹೋರಾಟಗಾರ