ಮುದ್ದೇಬಿಹಾಳ: ನಾಗರಬೆಟ್ಟದಲ್ಲಿರುವ ಅಡವಿ ಸೋಮನಾಳ ಬಹುಹಳ್ಳಿ ಕುಡಿವ ನೀರಿನ ಯೋಜನೆಯ ಸ್ಥಾವರದಲ್ಲಿ ಸಿಬ್ಬಂದಿಯ ಪರಿಸರ ಪ್ರೇಮದಿಂದಾಗಿ ಇಲ್ಲಿನ ವಾತಾವರಣ ಹಸಿರುಮಯವಾಗಿದೆ.
ತಾಲೂಕಿನ ನಾಗರಬೆಟ್ಟದಲ್ಲಿರುವ ಅಡವಿ ಸೋಮನಾಳ ಬಹುಹಳ್ಳಿ ಕುಡಿವ ನೀರಿನ ಯೋಜನೆಯ ಸ್ಥಾವರದಲ್ಲಿ ನಾರಾಯಣಪೂರ ಜಲಾಶಯದ ನೀರು ಶುದ್ಧೀಕರಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ನೀರು ಶುದ್ಧಿಕರಣಗೊಳಿಸಿ ಹಳ್ಳಿಹಳ್ಳಿಗೂ ಪೂರೈಸುವ ಜವಾಬ್ದಾರಿಯನ್ನು ಬಿಡುವಿಲ್ಲದೇ ಸಿಬ್ಬಂದಿ ಮಲ್ಲಿಕಾರ್ಜುನ ಹಿರೇಮಠ ಮಾಡುತ್ತಿದ್ದಾರೆ. ಇದಲ್ಲದೇ ಸ್ಥಾವರದ ಆವರಣದಲ್ಲಿ ವಿವಿಧ ಮರಗಳನ್ನು ನೆಟ್ಟು ಹಸಿರುಮಯ ವಾತಾವರಣ ನಿರ್ಮಿಸಿದ್ದಾರೆ.
ಇದರಿಂದಾಗಿ ಇಲ್ಲಿ ಶುದ್ಧವಾದ ಆಮ್ಲಜನಕ ಉತ್ಪತ್ತಿಯಾಗಿ ಪರಿಸರಕ್ಕೆ ಕೊಡುಗೆಯಾಗಿ ದೊರೆಯುವಂತಾಗಿದೆ. ಬೇವು, ಮಾವು, ಚಿಕ್ಕು, ಪೇರಲ, ತೆಂಗು, ವಿವಿಧ ಹೂಗಳು ಸೇರಿದಂತೆ ಹಣ್ಣಿನ ಮರಗಳನ್ನು ಬೆಳೆಯಲಾಗಿದೆ. ಅಲ್ಲದೇ ಸ್ಥಾವರದ ಆವರಣದಲ್ಲೂ ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಿದೆ.
ಸ್ಥಾವರದಲ್ಲಿ ಕೆಲ ಸಮಸ್ಯೆ:
ಸ್ಥಾವರಕ್ಕೆ ಹೋಗುವ ಮಾರ್ಗದಲ್ಲಿ ವಿದ್ಯುತ್ ದೀಪಗಳಿಲ್ಲದೇ ಸಿಬ್ಬಂದಿಗೆ ರಾತ್ರಿ ಸಮಯದಲ್ಲಿ ಸಂಚರಿಸಲು ತೊಂದರೆಯಾಗಿದೆ. ಈ ಮಾರ್ಗದಲ್ಲಿ ಪಂಚಾಯಿತಿ ಅಥವಾ ಸಂಬಂಧಪಟ್ಟ ಇಲಾಖೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿವೆ.
ಹಲವಾರು ವರ್ಷಗಳಿಂದ ಕುಡಿವ ನೀರಿನ ಫಿಲ್ಟರ್ ಮಾಡುವ ಸ್ಥಾವರದಲ್ಲಿರುವ ಗ್ರಿಲ್‌ಗಳು ತುಕ್ಕು ಹಿಡಿದಿದ್ದು, ಕೆಲವೆಡೆ ಮುರಿದು ಹೋಗಿವೆ. ಅವುಗಳನ್ನು ಹೊಸದಾಗಿ ಹಾಕಿಸುವ ಕಾರ್ಯ ಆಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಕೆಟ್ಟು ನಿಂತಿರುವ ಕ್ಲೋರಿನೇಶನ್ ಯಂತ್ರ:
ಸರ್ಕಾರದಿಂದ ಎಂದು ಸ್ಥಾವರ ಉದ್ಘಾಟನೆಯಾಗಿದೆಯೋ ಅಂದೇ ಪೂರೈಸಲಾಗಿದ್ದ ಕ್ಲೋರಿನೇಶನ್ ಯಂತ್ರ ಕೆಟ್ಟಿದೆ. ಇದರಿಂದ ಸದ್ಯಕ್ಕೆ ಬ್ಲೀಚಿಂಗ್ ಪೌಡರ್ ಮತ್ತು ಆಲಂ ಹಾಕಿ ನೀರನ್ನು ಶುದ್ಧೀಕರಣ ಮಾಡಲಾಗುತ್ತಿದೆ. ಯಾಂತ್ರೀಕೃತವಾಗಿ ನೀರನ್ನು ಶುದ್ಧಗೊಳಿಸುವ ಕಾರ್ಯ ಇಲ್ಲಿ ಆಗುತ್ತಿಲ್ಲ.
ಸದ್ಯಕ್ಕೆ ಲಾಕ್ಡೌನ್ ಇರುವ ಕಾರಣ ಸ್ಥಾವರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದು ಆರ್.ಡಬ್ಲ್ಯೂ.ಎಸ್ ಅಧಿಕಾರಿ ಜೆ.ಪಿ.ಶೆಟ್ಟಿ ಮಾಹಿತಿ ನೀಡಿದ್ದಾರೆ.