ವಿಜಯಪುರ: ಜನರು ಕೊರೊನಾದಿಂದ ಸಾಯುತ್ತಿಲ್ಲ. ಬೆಡ್ ಇಲ್ಲದೆ, ಆಕ್ಸಿಜನ್ ಸಿಗದೇ, ರೆಮ್‌ಡಿಸಿವರ್ ಸಿಗದೆ ಸಾಯ್ತಿದ್ದಾರೆ ಎಂಬ ವಾಸ್ತವ ಅಂಶವನ್ನು ನಗರದ ಬಿಎಲ್ಡಿಇ ಸಂಸ್ಥೆಯ ಮುಖ್ಯಸ್ಥ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ ಬಿಚ್ಚಿಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ದುರ್ದೈವದ ಪರಿಸ್ಥಿತಿಯಾಗಿದೆ. ಸರ್ಕಾರ ಕತೆ ಹೇಳುವ ಸಮಯವಲ್ಲ, ಇದು ಯುದ್ಧದ ಸಮಯ. ಮಹಾಮಾರಿ ಕೋವಿಡ್ ವಿರುದ್ದ ಯುದ್ಧ ಮಾಡಬೇಕಾಗಿದೆ. ಇದಕ್ಕೆ ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಕೆ ಮಾಡಿ ರೋಗದ ವಿರುದ್ಧ ಹೋರಾಡಬೇಕು. ಇದು ಪ್ರಚಾರ ಮಾಡುವ ಸಮಯ ಅಲ್ಲ. ಸರ್ಕಾರ ಪ್ರಚಾರಕ್ಕಾಗಿ ಸ್ಟೇಟಮೆಂಟ್ ಕೊಡಬಾರದು ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಮಾಡಿ, ನಂತರ ಇಷ್ಟು ಮಾಡಿದ್ದೀವಿ ಅಂತ ಹೇಳಿ. ಇದು ರಾಜಕೀಯ ಮಾಡೋ ಸಮಯ ಅಲ್ಲವೇ ಅಲ್ಲ. ಇದೊಂದು ಸ್ಮೂಕ್ಷ್ಮ ವಿಚಾರವಾಗಿದೆ. ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು. ಎಲ್ಲರನ್ನೂ ಜತೆಗೂಡಿಸಿಕೊಂಡು ಹೋದಾಗ ಕೊರೊನಾ ರೋಗ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ಪ್ರತಿಯೊಬ್ಬರು 5 ಬೆಡ್ ಆಸ್ಪತ್ರೆ ಮಾಡಿದ್ರು ಎಷ್ಟೋ ಸಹಾಯವಾಗುತ್ತೆ ಎಂದು ರಾಜಕಾರಣಿಗಳಿಗೆ ಎಂ.ಬಿ. ಪಾಟೀಲ ಸಲಹೆ ಕೊಟ್ಟರು.