ವಿಜಯಪುರ: ಹಲವು ವರ್ಷಗಳಿಂದ ತಣ್ಣಗಾಗಿದ್ದ ಗ್ಯಾಂಗ್ ಸಂಸ್ಕೃತಿ ಜಿಲ್ಲೆಯಲ್ಲಿ ಮತ್ತೆ ಚಿಗುರೊಡೆದಿದೆ. ಹದಿಹರೆಯದ ಯುವಕರು ಭೀಮಾತೀರದ ನಟೋರಿಯಸ್‍ಗಳನ್ನು ಆದರ್ಶವಾಗಿ ಇಟ್ಟುಕೊಂಡು ಗ್ಯಾಂಗ್ ಸಂಸ್ಕೃತಿ ಆರಂಭಿಸಿದ್ದು, ಪೊಲೀಸರ ನಿದ್ದೆಗೇಡಿಸಿದೆ.
ನವೆಂಬರ್ 2ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಶೂಟೌಟ್ ಹಾಗೂ ವಿಜಯಪುರದ ಮನಗೂಳಿ ಅಗಸಿ ಬಳಿಯ ಸ್ಮಶಾನ ಹತ್ತಿರ ನಡೆದ ಶೂಟೌಟ್ನಲ್ಲಿ ಬಂಧಿತರಾದವರೆಲ್ಲ 23 - 24 ವಯಸ್ಸಿನ ಯುವಕರು ಎನ್ನುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಧರ್ಮರಾಜ್ ಚಡಚಣ, ಬಾಗಪ್ಪ ಹರಿಜನ ಎನ್ನುವ ಭೀಮಾತೀರದ ಹಂತಕರ ಹೆಸರಿನಲ್ಲಿ ವಾಟ್ಸ್ಆ್ಯಪ್ ಮಾಡಿಕೊಂಡು ಕಂಟ್ರಿ ಪಿಸ್ತೂಲ್ ಹಿಡಿದುಕೊಂಡು ಕೊಲೆ, ಕೊಲೆ ಯತ್ನ, ದರೋಡೆಗಳಂತಹ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇದರಲ್ಲಿ ಬಹುತೇಕರು ವಿಜಯಪುರ ನಗರವಾಸಿಗಳಾಗಿದ್ದು, ಅವರಿಗೆ ಕಂಟ್ರಿ ಮೇಡ್ ಪಿಸ್ತೂಲ್ ಹೇಗೆ ದೊರೆಯುತ್ತಿದೆ ಎನ್ನುವ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ಶೋಕಿಗಾಗಿ ಕೈಯಲ್ಲಿ ಗನ್ ಹಿಡಿದುಕೊಂಡು ಸಿನಿಮಾ ಸ್ಟೈಲ್‍ನಲ್ಲಿ ಫೋಸ್ ಕೊಡುತ್ತಾ ವಾಟ್ಸ್ಆ್ಯಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಅಂತಹ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇದು ಹಳೆ ವಿಡಿಯೋ ಇರಬಹುದು ಎನ್ನುವುದು ಪೊಲೀಸರ ಸಂಶಯ.
ಕೈಯಲ್ಲಿ ಗನ್ ಹಿಡಿದು ಜೈಲಿನಿಂದ ಹೊರಗೆ ಬಂದ ಮೇಲೆ ಮತ್ತಷ್ಟು ಧೈರ್ಯ ಬಂದಿದೆ. ಕೆಲವರಿದ್ದಾರೆ ಅವರನ್ನು ಕೊಲೆ ಮಾಡುವ ಬೆದರಿಕೆಯನ್ನು ಆ ಯುವಕ ವಿಡಿಯೋದಲ್ಲಿ ಮಾಡಿದ್ದಾನೆ. ಇದೇ ರೀತಿ ವಿಜಯಪುರದಲ್ಲಿ ನಡೆದ ಶೂಟೌಟ್ನಲ್ಲಿ ಬಂಧಿತನಾಗಿದ್ದ ಯುವಕನೊಬ್ಬ ತಾನೆ ಶೂಟೌಟ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದನು. ಈಗ ಆತನನ್ನು ಪೊಲೀಸರು ಬಂಧಿಸಿ ದರ್ಗಾ ಜೈಲಿಗೆ ಕಳುಹಿಸಿದ್ದಾರೆ. ಗೊತ್ತು ಗುರಿ ಇಲ್ಲದೇ ಅಪರಾಧ ಚಟವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ.
ಮಹಾರಾಷ್ಟ್ರದಿಂದ ಅಕ್ರಮವಾಗಿ ಆಮದಾಗಿ ಭೀಮಾತೀರದಲ್ಲಿ ಕಂಟ್ರಿ ಪಿಸ್ತೂಲ್ ದೊರೆಯುತ್ತಿದೆ ಎನ್ನುವುದು ಪೊಲೀಸರ ಸಂಶಯವಾಗಿದೆ. ಈಗಾಗಲೇ ಭೀಮಾತೀರದ ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಅವರಿಗೂ ಸಹ ಜೀವ ಬೆದರಿಕೆ ಹಾಕಲಾಗಿದೆ. ಚಿಕ್ಕ- ಚಿಕ್ಕ ವಯಸ್ಸಿನಲ್ಲಿ ಅಪರಾಧ ಕೃತ್ಯದ ಶೋಕಿ ಹಚ್ಚಿಕೊಂಡಿರುವ ಯುವಕರು ಅಪರಾಧ ಚಟುವಟಿಕೆಯತ್ತ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ಅರಿತಿರುವ ವಿಜಯಪುರ ಪೊಲೀಸರು ಹಳೆ ರೌಡಿಗಳನ್ನು ಕರೆಯಿಸಿ ಗೂಂಡಾ ಕಾಯ್ದೆ ಪ್ರಯೋಗ ಮಾಡಿ ಗಡಿಪಾರು ಮಾಡುವ ಎಚ್ಚರಿಕೆ ನೀಡಿದ್ದಾರೆ.