ವಿಜಯಪುರ: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹರಿಯುವ ಡೋಣಿ ನದಿ ಗಾತ್ರದಲ್ಲಿ ಜಿಲ್ಲೆಯ ಉಳಿದ ನದಿಗಳಿಗಿಂತ ಚಿಕ್ಕದಾಗಿದೆ. ಆದರೆ ಮಳೆ ಬಂದರೆ ಇದರ ಪ್ರಭಾವ ಮಾತ್ರ ರೈತಾಪಿ ಜನರನ್ನು ಕಾಡುತ್ತಲೇ ಇದೆ. ಪ್ರತಿ ವರ್ಷ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ನದಿ ಪಾತ್ರದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಜಮೀನು ಕೊಚ್ಚಿ ಹೋಗುತ್ತಿದೆ. ಇಲ್ಲಿ ಬೆಳೆದ ಬೆಳೆ ಡೋಣಿಗೆ ಅರ್ಪಣೆ ಮಾಡಬೇಕಾಗಿದೆ.
ಈ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ, 2004ರಿಂದಲೂ ಇದೆ. ಡೋಣಿ ನದಿಯ ಹೂಳೆತ್ತಬೇಕೆಂದು ಎರಡು ದಶಕಗಳಿಂದಲೂ ರೈತರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಹೋರಾಟಕ್ಕೆ ಜಯ ಮಾತ್ರ ಸಿಕ್ಕಿಲ್ಲ. ಪ್ರತಿ ಚುನಾವಣೆ ಬಂದಾಗ ಜನಪ್ರತಿನಿಧಿಗಳು ಡೋಣಿ ನದಿ ಹೂಳೆತ್ತುವ ಭರವಸೆ ನೀಡುತ್ತಾರೆ ಹೊರತು ಭರವಸೆ ಮಾತ್ರ ಈಡೇರಿಸಿಲ್ಲ ಎನ್ನುವ ಆಕ್ರೋಶ ಅನ್ನದಾತನಲ್ಲಿದೆ.
ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಬಂದಾಗ ಡೋಣಿ ನದಿಯಿಂದ ಸಾರವಾಡ, ಹೊನವಾಡ, ತಾಳಿಕೋಟೆ, ತಿಕೋಟಾ, ಬಾಬಾನಗರ, ಬಿಜ್ಜರಗಿ ಸೇರಿದಂತೆ ಹತ್ತು ಹಲವು ಹೋಬಳಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. 2004, 2008ರಲ್ಲಿ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಬಂದಾಗ ಹಲವು ಗ್ರಾಮಗಳಿಗೆ ನೀರು ನುಗ್ಗಿತ್ತು. ಹೂಳೆತ್ತದ ಕಾರಣ ನೀರು ಸರಾಗವಾಗಿ ಹರಿಯಲು ಅನು ಇಲ್ಲದೇ ಡೋಣಿ ನದಿ ಹೊಲಗಳತ್ತ ನುಗ್ಗುವ ಕಾರಣ ಬೆಳೆ ನಷ್ಟವಾಗುತ್ತಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ಡೋಣಿ ನದಿ ತಟದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಬಿ.ಎಸ್.ಯಡಿಯೂರಪ್ಪ ಸಿಎಂ ಇದ್ದಾಗ 2008ರಲ್ಲಿ ಡೋಣೆ ನದಿ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ರೈತರು ಅವರ ಕಾರಿಗೆ ಮುತ್ತಿಗೆ ಹಾಕಿ ಡೋಣಿ ನದಿ ಹೂಳೆತ್ತುವ ಬೇಡಿಕೆ ಇಟ್ಟಿದ್ದರು. ಅಂದು ಹೂಳೆತ್ತುವ ಭರವಸೆ ನೀಡಿದ್ದ ಬಿಎಸ್ವೈ ಮತ್ತೆ ಎರಡು ಬಾರಿ ಸಿಎಂ ಆದರೂ ಭರವಸೆ ಮಾತ್ರ ಈಡೇರಿಲ್ಲ. ಕಾಂಗ್ರೆಸ್ ಅಧಿಕಾರವಧಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಡೋಣಿ ನದಿ ಹೂಳೆತ್ತುವ ಕಾಮಗಾರಿ ನಡೆದೇ ಇಲ್ಲ. ಕೇವಲ ಶಂಕು ಸ್ಥಾಪನೆ ಮಾತ್ರ ಮಾಡಲಾಗಿತ್ತು ಎನ್ನುವ ಆಕ್ರೋಶದ ನುಡಿ ರೈತರದ್ದಾಗಿದೆ.
ಡೋಣಿ ನದಿಗೆ ಪ್ರವಾಹ ಬಂದರೆ ಪ್ರತಿ ಸಲ ಕನಿಷ್ಠ 2 ಸಾವಿರ ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಹೋಮವಾಗುತ್ತದೆ. ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಮತ್ತೊಮ್ಮೆ ಡೋಣಿ ನದಿ ತುಂಬಿ ಹರಿಯುತ್ತಿದೆ. ರೈತರು ಬೆಳೆದ ಬೆಳೆ ಮತ್ತೊಮ್ಮೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಿ ಡೋಣಿ ನದಿಯ ಹೂಳೆತ್ತುವ ಕಾಮಗಾರಿ ಆರಂಭಿಸಿ, ಈ ಭಾಗದ ರೈತರ ಸಂಕಷ್ಟಕ್ಕೆ ನೆರವಾಗಬೇಕಾಗಿದೆ.