ವಿಜಯಪುರ: ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಲುವೆ ( ಮೇಲ್ಸೇತುವೆ ಕಿಲಾಲ್) ನಿರ್ಮಾಣಕ್ಕೆ ಭೂಮಿ ನೀಡಿದ್ದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಮುಳುವಾಡ ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ 2017 ಅಕ್ಟೋಬರ್ 17 ರಂದು ಕನ್ನೂರ ಗ್ರಾಮದ 200 ಕ್ಕೂ ಅಧಿಕ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಕನ್ನೂರ ಗ್ರಾಮದ ರೈತರ ಜಮೀನು, ಮನೆ, ಮರಗಳನ್ನು ಕಾಲುವೆ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗಿದೆ. ಭೂಮಿ, ಮನೆ ಕಳೆದುಕೊಂಡು ಎರಡು ವರ್ಷ ಕಳೆದರೂ ರೈತರಿಗೆ ಯಾವುದೇ ಪರಿಹಾರ ಹಣ ನೀಡಿಲ್ಲವೆಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ಕನ್ನೂರ ಗ್ರಾಮಕ್ಕೆ ಅಧಿಕಾರಿಗಳು ಬಂದು ರೈತರ ಸಹಿ ಮಾಡಿಸಿಕೊಂಡು ಹೋಗುತ್ತಾರೆ. ಆದರೆ, ನಿವೇಶನ ಕಳದುಕೊಂಡ ರೈತರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಸರ್ಕಾರ ಪರಿಹಾರ ನೀಡುವ ಕುರಿತು ಯಾವುದೇ ನೊಟೀಸ್ ಜಾರಿ ಮಾಡದಿರೋದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಭೂಮಿ ಕಳೆದುಕೊಂಡ ರೈತರಿಗೆ 6.1 ನೋಟಿಸ್ ನೀಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರಿಗಳು ಬರುತ್ತಿದ್ದಾರೆ. ಕಾಲುವೆ ನಿರ್ಮಾಣಕ್ಕೆ ರೈತರ ವಾಣಿಜ್ಯ ಬೆಳೆಗಳು ಹಾಳಾಗಿವೆ. ಕೆಲ ರೈತರಿಗೆ ಪರಿಹಾರ ನೀಡುವುದಾಗಿ ನೋಟಿಸ್ ಬಂದಿವೆ. ಇನ್ನೂ ಕೆಲವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.