ವಿಜಯಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕೃಷ್ಣಾನದಿಗೆ ಹೆಚ್ಚುವರಿ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಇಂದು ಆಲಮಟ್ಟಿ ಆಣೆಕಟ್ಟಿಗೆ 2.18 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, ಕೃಷ್ಣಾ ಜಲಾಶಯ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು ಎರಡುವರೆ ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದ್ದು, ನಾರಾಯಣಪುರ ಹಿನ್ನೀರಿನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 519.60 ಮೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಸದ್ಯ 519.40 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಒಟ್ಟು 123 ಟಿಎಂಸಿ ಸಂಗ್ರಹಿಸಬಹುದಾಗಿದೆ.
ಈಗಾಗಲೇ 119.40 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದು ಮಧ್ಯಾಹ್ನ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದರೆ ಮತ್ತಷ್ಟು ಕ್ಯೂಸೆಕ್ ನೀರನ್ನು ಹೊರಬಿಡುವುದು ಸಾಧ್ಯತೆಗಳು ಹೆಚ್ಚಿದ್ದು, ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಇನ್ನೂ 4 ದಿನ ಮಳೆಯಾಗುವ ಸಾಧ್ಯತೆ ಇರುವದರಿಂದ ಮತ್ತೊಮ್ಮೆ ಕೃಷ್ಟಾ ಪಾತ್ರದ ಜನರಲ್ಲಿ ಆತಂಕ ಮೂಡಿದೆ.