ವಿಜಯಪುರ: ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ, ನಕಲಿ ಮತದಾರರ ಹೆಸರುಗಳು ಸೇರ್ಪಡೆಯಾಗಿರುವ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಸಂಬದ್ಧವಾಗಿ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ, ಅದರ ಫಲವಾಗಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಮತದಾರರ ಪಟ್ಟಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೋಗಸ್ ಹೆಸರುಗಳು ಸೇರ್ಪಡೆಯಾಗಿವೆ ಎಂದು ದೂರಿದರು. ನಕಲಿ ಮತದಾರರ ಹೆಸರು ಸೇರ್ಪಡೆ ಹಾಗೂ ನಕಲಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ,
ಈ ರೀತಿಯಾಗಿ ಅಸಂಬದ್ಧ, ಕಾನೂನು ಬಾಹಿರವಾಗಿ ವಿಜಯಪುರ ನಗರ ಶಾಸಕರು ಆಯ್ಕೆಯಾಗಿದ್ದಾರೆ, ಈ ರೀತಿಯ ವಿದ್ಯಮಾನಗಳು ಸೃಷ್ಟಿಸಲು ಸಹಕರಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ವಿರುದ್ಧ ಸುಮಾರು 8 ಸಾವಿರ ಮತಗಳ ಅಂತರದ ಗೆಲುವು ಪಡೆದಿದ್ದರು. ಒಟ್ಟು ಯತ್ನಾಳ್ ಅವರು 94,211 ಮತಗಳನ್ನು ಪಡೆದಿದ್ದರೇ, ಅಬ್ದುಲ್ ಹಮೀದ್ ಮುಶ್ರೀಫ್ ಅವರು 85,978 ಮತಗಳನ್ನು ಗಳಿಸಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು, 1999 ಹಾಗೂ 2004ರಲ್ಲಿ ಎರಡು ಬಾರಿ ಬಿಜೆಪಿಯಿಂದ ವಿಜಯಪುರ ಮತಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು, ಜೊತೆಗೆ ಜವಳಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1994 ಹಾಗೂ 2018ರಲ್ಲಿ ಎರಡು ಬಾರಿ ಶಾಸಕರಾಗಿಯೂ ಆಯ್ಕೆ ಆಗಿದ್ದಾರೆ. ಒಂದು ಬಾರಿ ಪಕ್ಷೇತರರಾಗಿ ವಿಧಾನ ಪರಿಷತ್ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ಕೇವಲ 20 ನಿಮಿಷಕ್ಕೆ ಮುಗಿದ ಸಭೆ: ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ
ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ - ಬೊಮ್ಮಾಯಿ: ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಮಾತನಾಡಿ, ಎರಡು ಮೂರು ದಿನಗಳಲ್ಲಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಲಿದ್ದು, ಸಭೆಯಲ್ಲೇ ಪ್ರತಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ. ಇದೊಂದು ಸೋಲಿನಿಂದ ನಾವು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ನಾವು ಮತ್ತೆ ರಾಜ್ಯದಲ್ಲಿ ಪುಟಿದೇಳುತ್ತೇವೆ. ಸಮರ್ಥ ಪ್ರತಿಪಕ್ಷವಾಗಿ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು. ವಿಧಾನಸಭಾ ಚುನಾವಣಾ ಫಲಿತಾಂಶದ ಆರು ದಿನಗಳ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆ ಆಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಸುಳ್ಯ : ನದಿಗೆ ಜಾರಿ ಬಿದ್ದು ಬಿಜೆಪಿ ಮುಖಂಡ ಸಾವು