ಮುದ್ದೇಬಿಹಾಳ(ವಿಜಯಪುರ): ಹಡಪದ ಅಪ್ಪಣ್ಣ ಸಮಾಜದ ಕುಲಶಾಸ್ತ್ರೀಯ ಅಧ್ಯಯನವನ್ನು ಶೀಘ್ರ ಪೂರ್ಣಗೊಳಿಸಿ ಸಮುದಾಯಕ್ಕೆ ನ್ಯಾಯ ತಂದುಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟಿಸಿ, ರಾಜ್ಯಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮುದಾಯದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆ ಈಡೇರಿಸಲಾಗುವುದು ಮತ್ತು ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ಅವರ ಜನ್ಮಸ್ಥಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರ್ಪಡೆ ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಈ ಸಮಾಜದ ಹೆಸರಿನಲ್ಲಿ ಒಂದು ನಿಗಮ ಇದ್ದು, ಅದರೆ ಅದರಲ್ಲಿ ನಿಮ್ಮನ್ನು ಸೇರಿಸಿಲ್ಲ. ಮುಂಬರುವ ದಿನಗಳಲ್ಲಿ ವೃತ್ತಿ ಆಧಾರಿತ ಯಾವ ಯಾವ ವೃತ್ತಿಗಳಿವೆ, ಕುಲಕಸುಬು ಕಾರ್ಮಿಕರಿದ್ದಾರೋ ಅವರಿಗಾಗಿ ವಿಶೇಷ ಕಾರ್ಯಕ್ರಮ ಮಾಡಿ, ಅವುಗಳನ್ನು ನಿಗಮದ ಮೂಲಕ ತಲುಪಿಸುವ ಕೆಲಸ ಮಾಡಲಾಗುತ್ತದೆ. ಶಿವಶರಣ ಹಡಪದ ಅಪ್ಪಣ್ಣ ಜನ್ಮ ಸ್ಥಳವಾದ ಮಸಬಿನಾಳ ಹಾಗೂ ಶಿವಶರಣೆ ಹಡಪದ ಲಿಂಗಮ್ಮ ಅವರ ಜನ್ಮ ಸ್ಥಳವಾದ ದೇಗಿನಾಳ ಗ್ರಾಮವನ್ನು ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಬೊಮ್ಮಾಯಿ ಘೋಷಿಸಿದರು.
ರಾಜ್ಯದಲ್ಲಿ ಕೇವಲ 1.6 ವರ್ಷದಲ್ಲಿ ಎಲ್ಲ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿದ್ದು ನೋಡಿದರೆ ನನಗೆ ವಿಸ್ಮಯ ಎನ್ನಿಸುತ್ತಿದೆ. ಇದಕ್ಕೆ ಸರ್ಕಾರ ನಿರ್ಮಿಸಿದ ಮುಕ್ತ ವಾತಾವರಣವೇ ಕಾರಣ. ದೈವವೇ ದೇವರು, ದಯವೇ ದೇವರೆಂದು ಭಾವಿಸಿದವನು ನಾನು. ದೈವೇಚ್ಚೆಯಿಂದ ಇಂದು ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿವೆ ಎಂದರು.
2016 ಕ್ಕಿಂತ ಮುಂಚೆ ನಾಯಿಂದ ಎಂಬ ಪದದ ಅಡಿಯಲ್ಲಿ ಈ ಎಲ್ಲ ಸಮುದಾಯಗಳು ಒಗ್ಗಟ್ಟಾಗಿದ್ದವು. ಆ ಪದವನ್ನು ತೆಗೆದು ಬೇರೆ ಬೇರೆ ಪದಗಳಿಂದ ವಿಂಗಡಿಸಿದರು. ಅಂದೇ ಈ ಸಮಾಜ ಸಂಘಟನೆಯಾಗಬೇಕಿತ್ತು. ಆದರೆ, ಆಗ ಸಂಘಟನೆ ಆಗಲು ಬಿಡಲಿಲ್ಲ. ಸಂಘಟಿತ ವಾತಾವರಣ ನಿರ್ಮಾಣ ಆಗಲಿಲ್ಲ. ಕೆಲವು ಹಿತಾಸಕ್ತಿಗಳು ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರುವ ಭಯದಿಂದ ಒಡೆದಾಳುವ ನೀತಿ ಅನುಸರಿಸಿದವು. ಆದರೆ ಇಂದು ಅದೆಲ್ಲವನ್ನು ತೊಡೆದು ಹಾಕಿ ಮುಕ್ತವಾದ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಅಪ್ಪಣ್ಣನ ಆದರ್ಶ ಅನುಕರಣೀಯ: ಹಡಪದ ಅಪ್ಪಣ್ಣ ಕಾಯಕನಿಷ್ಠರು. ಬಸವಣ್ಣನವರ ಅತ್ಯಾಪ್ತರು. ಹಡಪದ ಅಪ್ಪಣ್ಣ ಇಲ್ಲದೇ ಬಸವಣ್ಣ ಯಾವುದೇ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ. ಇದಕ್ಕೆ ಹಡಪದ ಅಪ್ಪಣ್ಣ ಅವರ ಆದರ್ಶವೇ ಕಾರಣ. ಹೀಗಾಗಿ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಸಿಎಂ ಕರೆ ಕೊಟ್ಟರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, 12 ನೇ ಸಮಾಜದಲ್ಲಿ ಬಸವಣ್ಣ ನವರ ನೇತೃತ್ವದಲ್ಲಿ ತುಳಿತಕ್ಕೆ ಒಳಗಾದ ಸಮಾಜಗಳ ಕಲ್ಯಾಣಕ್ಕಾಗಿ ಹೊಸ ಧರ್ಮ ಹುಟ್ಟುಹಾಕಿದವರು ಬಸವಣ್ಣನವರು. ಕಾಯಕ ಮತ್ತು ದಾಸೋಹ ತತ್ವದಡಿ 770 ಗಣಂಗಳ ಶರಣರಿಗೆ ಆಶ್ರಯ ನೀಡಿದ್ದರು. ಅದರಲ್ಲಿ ಹಡಪದ ಅಪ್ಪಣ್ಣ ಸಹ ಒಬ್ಬರಾಗಿದ್ದು, ನೀಲಮ್ಮ ಅವರನ್ನು ತಂಗಡಿಗೆ ಕರೆ ತಂದ ಮಹಾನ್ ಶರಣರು. ಅವರ ಆಶಯದಂತೆ ಸುಂದರ ಸಮಾಜವನ್ನು ನಾವೆಲ್ಲರೂ ನಿರ್ಮಿಸೋಣ. ಹಡಪದ ಸಮಾಜ ಹೀನಾಯ ಸ್ಥಿತಿಯಲ್ಲಿದೆ. ಹಿಂದುಳಿದ ಈ ಸಮುದಾಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಬಸವಾದಿ ಶರಣರ ತತ್ವ ಸಿದ್ದಾಂತ ನಂಬಿ, ಜೀವನದಲ್ಲಿ ಅಳವಡಿಸಿಕೊಂಡು ಸುಮಾರು ಎಂಟನೂರು ವರ್ಷಗಳಿಂದ ಕಾಯಕದಲ್ಲಿ ತೊಡಗಿದ ಸಮಾಜ ಹಡಪದ ಅಪ್ಪಣ್ಣ ಸಮಾಜ. ಬಸವಣ್ಣನವರಿಗೆ ಸೇವಕನಾಗಿ ಹಡಪದ ಅಪ್ಪಣ್ಣ ನಿಂತಂತೆ ಇಂದು ಇಡೀ ಸಮುದಾಯ ನಮ್ಮೊಂದಿಗೆ ನಿಲ್ಲುವ ವಿಶ್ವಾಸವಿದೆ. ಅಭಿವೃದ್ಧಿ ನಿಗಮದ ಬೇಡಿಕೆಯನ್ನು ಸಿಎಂ ಈಡೇರಿಸಬೇಕು ಎಂದು ವಿನಂತಿಸಿದರು. ಕಾಯಕ ಯೋಜನೆ ಮೂಲಕ ಕುಲಸಬು ಅವಲಂಬಿಸಿದ ಸಮುದಾಯಗಳಿಗೆ ನ್ಯಾಯ ಕಲ್ಪಿಸಿದ ಬಸವರಾಜ ಬೊಮ್ಮಾಯಿ ಅವರು ಅದರಲ್ಲಿ ವಿಶೇಷವಾಗಿ ಹಡಪದ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ನೀಡಬೇಕೆಂದು ಮನವಿ ಮಾಡಿದರು.
ತಂಗಡಗಿಯ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಹಡಪದ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಪ್ರವರ್ಗ 2ಎ ಯಲ್ಲಿರುವ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದರು. ಹಡಪದ ಸಮಾಜ 12ನೇ ಶತಮಾನದಿಂದ ತುಳಿತಕ್ಕೊಳಪಡುತ್ತಲೇ ಬಂದಿದೆ. ಹೀಗಾಗಿ ಈ ಸಮಾಜಕ್ಕೆ ಅಸ್ತಿತ್ವ ಕೊಡಬೇಕು. ಅಪಣ್ಣನ ಜನ್ಮ ಸ್ಥಳವಾದ ಮಸಬಿನಾಳ ಗ್ರಾಮವನ್ನು ಹಾಗೂ ದೇಗಿನಾಳ ಗ್ರಾಮವನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಿ ಅಭಿವೃದ್ಧಿ ಪಡಿಸಬೇಕು. ಸಾಮಾಜಿಕ,ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಹಡಪದ ಸಮಾಜದ ಸರ್ವಾಂಗೀಣ ಪ್ರಗತಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ತಮ್ಮ ಬೇಡಿಕೆಗಳ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ತಮ್ಮನ್ನು ಎರಡನೇ ಬಸವಣ್ಣ, ಆಧುನಿಕ ಬಸವಣ್ಣ ಎಂದು ನಿರೂಪಕರು, ಸ್ವಾಮೀಜಿಯವರು ಕೊಂಡಾಡಿದನ್ನು ನಯವಾಗಿಯೇ ತಳ್ಳಿ ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ, ನಾನು ಬಸವಣ್ಣನವರ ಪಾದ ಧೂಳಿಗೂ ಸಮನಲ್ಲ. ಹೀಗಾಗಿ ಇಂಥ ಹೊಗಳಿಕೆ ಬೇಡ ಎಂದರು. ಬಸವಣ್ಣನವರೇ ಹೇಳಿದಂತೆ ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸಿದರಯ್ಯ ಎಂಬಂತೆ ಹೊಗಳಿಕೆ ಎಂದರೆ ನನಗೆ ಭಯ. ತೆಗಳಿಕೆ ಎಂದರೆ ಇಷ್ಟ. ಅಂಥ ತೆಗಳಿಕೆಯನ್ನೇ ಮೆಟ್ಟಿಲನ್ನಾಗಿಸಿಕೊಂಡು ಮೇಲಕ್ಕೆ ಬಂದವ ನಾನು. ಹೀಗಾಗಿ ನನ್ನನ್ನು ಎರಡನೇ ಬಸವಣ್ಣ, ಆಧುನಿಕ ಬಸವಣ್ಣ ಎಂದು ಸಂಬೋಧಿಸಬೇಡಿ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ: ಸಿಎಂ