ಮುದ್ದೇಬಿಹಾಳ: ಅತಿವೃಷ್ಟಿಯಿಂದಾಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಹಾಗೂ ನಿಡಗುಂದಿ ತಾಲೂಕಿನ ಕೆಲವು ಗ್ರಾಮಗಳು ಸೇರಿದಂತೆ 1,158 ಮನೆಗಳು ಹಾನಿಯಾಗಿದ್ದು, ಅಂದಾಜು 42 ಸಾವಿರ ಹೆಕ್ಟೇರ್ ಪ್ರದೇಶದ ಜಮೀನಿನ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸಂಜೆ ತುರ್ತು ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹಳ ದೊಡ್ಡ ಸಮಸ್ಯೆ ಎಂದರೆ ಅಧಿಕಾರಿಗಳು ಹೊಲಗಳಿಗೆ ಹೋಗಲಾಗದ ಪರಿಸ್ಥಿತಿ ಸದ್ಯಕ್ಕೆ ಇದೆ. ಹೊಲದಲ್ಲಿ ಹಾನಿಯಾಗಿರುವ ಬೆಳೆಯ ನಷ್ಟದ ಅಂದಾಜು ಹೆಚ್ಚುವ ಸಾಧ್ಯತೆ ಇದೆ. ಹಾನಿಯಾದ ಮನೆಗಳ ಸಂಖ್ಯೆಯೂ ಏರಿಕೆಯಾಗಲಿದ್ದು ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಈವರೆಗೆ 20,666 ಜನರಿಗೆ ಟೆಸ್ಟ್ ಮಾಡಿದ್ದೇವೆ. ಶೇ.10 ರಷ್ಟು ಮಾತ್ರ ಪಾಸಿಟಿವ್ ಬಂದಿದ್ದು, ಇಡೀ ತಾಲೂಕಿನಲ್ಲಿ ಇಲ್ಲಿಯವರೆಗೆ ಅಧಿಕೃತವಾಗಿ ಕೋವಿಡ್‌ನಿಂದ 13 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವ್ ಬಂದಿದ್ದ ಎಲ್ಲರೂ ಗುಣಮುಖರಾಗಿ ಬಂದಿದ್ದಾರೆ. ಈಗ 66 ಜನ ಪಾಸಿಟಿವ್ ಬಂದಿರುವ ರೋಗಿಗಳು ಹೋಂ ಕ್ವಾರಂಟೈನ್‌ಲ್ಲಿದ್ದುಕೊಂಡು ಔಷಧ ತೆಗೆದುಕೊಳ್ಳುತ್ತಿದ್ದಾರೆ. ಕೊರೊನಾ ಸಂಬಂಧಿಸಿದಂತೆ ಟಾಸ್ಕ್ಪೋರ್ಸ್ ಸಕ್ರಿಯವಾಗಿ ಕೆಲಸ ಮಾಡಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕುರಿಗಳಿಗೆ ಲಸಿಕೆ ಒದಗಿಸಲು ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು, ಮುದ್ದೇಬಿಹಾಳ ತಾಲೂಕಿನಲ್ಲಿರುವ 2 ಲಕ್ಷ ಕುರಿಗಳಿಗೆ ನೀಲಿಬಾಯಿ ರೋಗಕ್ಕೆ ಲಸಿಕೆ ಅಗತ್ಯವಿದೆ. ಅದನ್ನು ಪೂರೈಸುವಂತೆ ಮನವಿ ಮಾಡಿಕೊಂಡಿದ್ದು, ಸಿಎಂ ಗಮನಕ್ಕೂ ಇದನ್ನು ತರಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್‌ರಾದ ಜಿ.ಎಸ್.ಮಳಗಿ, ಅನಿಲಕುಮಾರ ಢವಳಗಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.