ಮುದ್ದೇಬಿಹಾಳ : ಕೊರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಆದೇಶ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆ ಮುದ್ದೇಬಿಹಾಳದ ಬಡ ಕೂಲಿ ಕಾರ್ಮಿಕರು, ಕೊಳಚೆ ಪ್ರದೇಶದ ಜನರು, ನಿರ್ಗತಿಕರಿಗೆ ಉಚಿತವಾಗಿ ಹಾಲು ವಿತರಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಯಾವುದೇ ಗೊಂದಲವಾಗದಂತೆ ಹಾಲು ವಿತರಿಸಲಾಗುತ್ತಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಪುರಸಭೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಎಚ್ಚರ ವಹಿಸಿ ಮನೆ ಮನೆಗೆ ತೆರಳಿ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದಾರೆ.
ವಿಜಯಪುರದ ಕೆಎಂಎಫ್ ಡೇರಿಯಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಪ್ರತಿನಿತ್ಯ ಎರಡು ಸಾವಿರ ಲೀಟರ್ ಹಾಲು ಬರುತ್ತದೆ. ಅದನ್ನು ಗೂಡ್ಸ್ ವಾಹನಗಳಲ್ಲಿ ತೆಗೆದುಕೊಂಡು ಒಂದು ವಾಹನದ ಜೊತೆಗೆ ನಾಲ್ಕು ಜನ ಪೌರಕಾರ್ಮಿಕರು ಮನೆ ಮನೆಗೆ ತೆರಳಿ ಹಾಲು ತಲುಪಿಸುತ್ತಿದ್ದಾರೆ. ಒಟ್ಟು 40 ಪೌರ ಕಾರ್ಮಿಕರು 13 ವಾರ್ಡ್ಗಳಿಗೆ ಉಚಿತವಾಗಿ ಹಾಲು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ ಕೆಲ ವಾರ್ಡ್ಗಳ ಸದಸ್ಯರು ಸಹ ಬಡವರಿಗೆ ಹಾಲು ಹಂಚುತ್ತಿದ್ದಾರೆ.
ಇನ್ನು ಮೇ 30 ರವರೆಗೂ ಈ ಹಾಲು ವಿತರಣೆ ಕಾರ್ಯ ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರ ಸಲಹೆ ಪಡೆದುಕೊಂಡು ಹಾಲು ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ವಾರ್ಡ್ನ ಜನರಿಗೆ ಮಾಸ್ಕ್ ಕೂಡ ವಿತರಿಸಲಾಗುತ್ತಿದೆ.