ಮುದ್ದೇಬಿಹಾಳ: ಅಧಿಕಾರಿಗಳು, ಮಾಧ್ಯಮದವರು ಕಾರ್ಯಕ್ರಮದ ಸ್ಥಳಕ್ಕೆ ಬರುವುದಕ್ಕೂ ಮುನ್ನವೇ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಾಲೂಕಿನ ಮುದ್ನಾಳ ತಾಂಡಾದ ಕೆರೆಯ ಬಳಿ ತರಾತುರಿಯಲ್ಲಿ ಭೂಮಿ ಪೂಜೆ ನೆರವೇರಿಸಿ ತೆರಳಿದ ಅರ್ಧ ಗಂಟೆಯಲ್ಲೇ ಯೋಜನೆಯ ಕಾಮಗಾರಿ ಆರಂಭಕ್ಕೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಠೇವಣಿ ಅನುದಾನದಲ್ಲಿ ತಾಲೂಕಿನ ಮುದ್ನಾಳ ತಾಂಡಾದ ಬಳಿ 5.24 ದಶಲಕ್ಷ ಲೀ. ಸಾಮರ್ಥ್ಯದ ನೈಸರ್ಗಿಕ ಜೈವಿಕ ತಂತ್ರಾಜ್ಞಾನದ ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆಯ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿ ಮುದ್ದೇಬಿಹಾಳಕ್ಕೆ ಹೊರಡಲು ಸಿದ್ಧತೆ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಉತ್ಕೃಷ್ಟವಾದ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವ ಸ್ಥಾವರ ಇದಾಗಿದ್ದು, ಅಂದಾಜು ₹ 7 ಕೋಟಿ ವೆಚ್ಚದಲ್ಲಿ ಮಲೀನ ನೀರು ಶುದ್ಧೀಕರಣಗೊಳಿಸಲಾಗುತ್ತದೆ. ಗ್ರಾಮಸ್ಥರಿಗೆ ತೊಂದರೆ ಆಗುವುದಿಲ್ಲ ಎಂದು ಅಲ್ಲಿಂದ ನಿರ್ಗಮಿಸಿದರು.
ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಎಇಇ ಬಿ.ಎಸ್.ಶ್ರೀನಿವಾಸ, ಸಹಾಯಕ ಅಭಿಯಂತರ ರಾಮರಾವ ರಾಠೋಡ ಅವರೊಂದಿಗೆ ಗ್ರಾಮಸ್ಥರು ಕೆಲಸ ಆರಂಭಿಸದಂತೆ ವಿರೋಧ ವ್ಯಕ್ತಪಡಿಸಿದರು. ಇಲ್ಲಿ ಸ್ಥಾವರ ನಿರ್ಮಿಸಬೇಡಿ ಎಂದು ಆಗ್ರಹಿಸಿದರು.