ವಿಜಯಪುರ: ಬಸವನ ಬಾಗೇವಾಡಿಯ ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಠೇವಣಿ ಹಣ ವಂಚನೆ ಮಾಡಿದೆ ಎಂದು ಆರೋಪಿಸಿ ಗ್ರಾಹಕರ ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿರಾಣಿ ಬ್ಯಾಂಕ್‌ಗಳಲ್ಲಿ 1,500 ಕ್ಕೂ ಅಧಿಕ ಗ್ರಾಹಕರು ಹಣವನ್ನು ಕಳೆದ ಹಲವು ವರ್ಷಗಳಿಂದ ಠೇವಣಿ ಮಾಡಿದ್ದಾರೆ. ಆದ್ರೆ ಬ್ಯಾಂಕ್ ಆಡಳಿತ ಮಂಡಳಿ ಗ್ರಾಹಕರ ಹಣ ನುಂಗಿದೆ. ಹೀಗಾಗಿ ಬಡ ಜನರು ಬ್ಯಾಂಕ್ ವಂಚನೆಯಿಂದ ಕಂಗಾಲಾಗಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಂದು ಬಾ ನಾಳೆ ಬಾ ಎಂದು ಹೇಳುತ್ತಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಮಾತ್ರ ಗ್ರಾಹಕರಿಗೆ ದುಡ್ಡು ವಾಪಸ್ ಮಾಡುವ ಕಾರ್ಯ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಮೋಸಕ್ಕೊಳಗಾದ ಗ್ರಾಹಕರು ಮನವರಿಕೆ ಮಾಡಿದರು.
ಇನ್ನು ನಿರಾಣಿ ಕ್ರೆಡಿಟ್ ಸೌಹಾರ್ದ 19 ಬ್ರ್ಯಾಂಚ್‌ಗಳಲ್ಲಿ ಗ್ರಾಹಕರು ವಂಚನೆಗೆ ಒಳಗಾಗಿದ್ದು, ಮುಂದೆ ಜೀವನಕ್ಕೆ ಸಹಾಯಕ್ಕೆ ಬರುತ್ತೇ ಎಂದು ಇಟ್ಟ ಹಣ ವಾಪಸ್ ಮಾಡದೇ ಸತಾಯಿಸುತ್ತಿದ್ದಾರೆ. ಕೇಳಲು ಹೋದರೆ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದರು.