ವಿಜಯಪುರ: ಖಾಸಗಿ ಶಾಲೆಯ ಬಾಲಕಿಯನ್ನು ಪ್ರೀತಿಯ ನಾಟಕವಾಡಿ ಅಪಹರಿಸಿಕೊಂಡು ಹೋಗಿದ್ದ ಚಾಲಕನನ್ನು ಬಂಧಿಸುವಲ್ಲಿ ವಿಜಯಪುರ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯು ನಗರದ ಹೊರವಲಯದ ಖಾಸಗಿ ಪಿಯುಸಿ ಕಾಲೇಜಿನ ವ್ಯಾನ್ ಡ್ರೈವರ್ ಎಂದು ತಿಳಿದು ಬಂದಿದೆ. ಈತ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್, ಡ್ರಾಪ್ ಮಾಡುತ್ತಿದ್ದನು. ಇತ್ತೀಚೆಗೆ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದನು.
ಘಟನೆಯ ಹಿನ್ನೆಲೆ: ಆರೋಪಿ ಚಾಲಕನ ಪ್ರೀತಿಯ ಬಲೆಗೆ ಬಿದ್ದಿದ್ದ ವಿದ್ಯಾರ್ಥಿನಿ ಜೂ.7ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದವಳು ಮನೆಗೆ ವಾಪಸ್ ಬಂದಿರಲಿಲ್ಲ. ತಂದೆ ಎಂದಿನಂತೆ ಮಗಳ ಬರುವಿಕೆಗಾಗಿ ಶಾಲಾ ವ್ಯಾನ್ ನಿಲ್ಲುವ ಜಾಗದಲ್ಲಿ ನಿಂತಿದ್ದರು. ಆದರೆ, ಮಗಳು ಬರದ ಕಾರಣ ಶಾಲಾ ಆಡಳಿತ ಮಂಡಳಿಗೆ ವಿಚಾರಿಸಿದಾಗ ಆಕೆ ಇಂದು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದರು. ಆದರೆ, ಆಕೆ ಆರೋಪಿ ಚಾಲಕನ ಜೊತೆ ಬೈಕ್‌ನಲ್ಲಿ ಹೋಗಿರುವುದನ್ನು ಕೆಲವರು ನೋಡಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ನೀಡಲಾಗಿತ್ತು. ದೂರು ಆಧರಿಸಿ ತನಿಖೆ ಆರಂಭಿಸಿದ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ ವಿದ್ಯಾರ್ಥಿನಿ ಸಮೇತ ವಾಪಸ್ ವಿಜಯಪುರಕ್ಕೆ ಕರೆದುಕೊಂಡು ಬಂದಿದ್ದಾರೆ.
'ಆರೋಪಿಗೆ ಮೊದಲೇ ಒಂದು ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಇಷ್ಟಿದ್ದರೂ ಸಹ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ತನ್ನ ಬಲೆಗೆ ಬೀಳಿಸಿ ಜೂ.7ರಂದು ಮಹಾರಾಷ್ಟ್ರಕ್ಕೆ ಅಪಹರಿಸಿಕೊಂಡು ಹೋಗಿದ್ದ. ಅಪಹರಣದ ಪ್ರಕರಣದಲ್ಲಿ ಆರೋಪಿಗೆ ಸಹಾಯ ಮಾಡಿದ ಇತರೆ ಐವರನ್ನೂ ಸಹ ಬಂಧಿಸಲಾಗಿದೆ. ನ್ಯಾಯಾಧೀಶರ ಎದುರು ಆರೋಪಿಗಳನ್ನು ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ' ಎಂದು ಎಸ್ಪಿ ಎಚ್.ಡಿ. ಆನಂದ ಕುಮಾರ ಮಾಹಿತಿ ನೀಡಿದರು.
ಇದನ್ನೂ ಓದಿ: Honour killing: ಮರ್ಯಾದೆಗಾಗಿ ಪ್ರೇಮಿಗಳ ಕೊಂದು ಮೊಸಳೆಗಳಿದ್ದ ನದಿಗೆ ಶವ ಬಿಸಾಡಿದ ಕುಟುಂಬಸ್ಥರು!