ವಿಜಯಪುರ: ಮಹಾಮಾರಿ ಕೊರೊನಾ ಪ್ರತಿಯೊಬ್ಬರಲ್ಲೂ ಭಯದ ವಾತಾವರಣ ಸೃಷ್ಟಿಸಿತ್ತು. ಕೋವಿಡ್ ರೋಗಿಗಳನ್ನು ಹತ್ತಿರದಿಂದ ನೋಡುವುದು ಹೋಗಲಿ, ಅವರಿಗೆ ಚಿಕಿತ್ಸೆ ನೀಡಲು ವೈದ್ಯ ಲೋಕ ಭಯ ಪಟ್ಟಿತ್ತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಕೋವಿಡ್ ರೋಗಿಗಳ ಆರೈಕೆಗೆ ಹೆಗಲು ಕೊಟ್ಟವರು ಶುಶ್ರೂಷಕಿ/ಶುಶ್ರೂಷಕರು. ಕೊರೊನಾ ವೇಳೆ ಅವರು ಕಾರ್ಯನಿರ್ವಹಿಸಿದ ಅನುಭವದ ಬಗ್ಗೆ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಶುಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಬಸಪ್ಪ ಹಿಪ್ಪರಗಿ ಕೋವಿಡ್ 19 ರೋಗದಿಂದ ಬಳಲುತ್ತಿದ್ದ ತನ್ನ ತಂದೆಯನ್ಹು ತಾನು ಶುಶ್ರೂಷಕರಾಗಿ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದನು. ಬೇರೆ ರೋಗಿಗಳ ಜತೆ ತನ್ನ ತಂದೆಗೂ ಚಿಕಿತ್ಸೆ ನೀಡುತ್ತಿದ್ದನು. ಆದರೆ, ವಿಧಿಯಾಟ ಅದೇ ಮಹಾಮಾರಿ ರೋಗಕ್ಕೆ ಅವರ ತಂದೆ ಬಲಿಯಾಗಬೇಕಾಯಿತು. ಇಷ್ಟಕ್ಕೆ ಆತ್ಮಸೈರ್ಯ ಕಳೆದುಕೊಳ್ಳದ ಆ ಶುಶ್ರೂಷಕ ತಂದೆಯ ಕ್ರಿಯಾಕ್ರಮ ಮುಗಿಸಿ ವಾಪಸ್ ಕರ್ತವ್ಯಕ್ಕೆ ಹಾಜರಾಗಿ ನೂರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ಅವರಲ್ಲಿ ತಮ್ಮ ತಂದೆಯನ್ನು ಕಂಡರು.
ಸಾಕಷ್ಟು ಶುಶ್ರೂಷಕ/ಶುಶ್ರೂಷಕಿಯರು, ವೈದ್ಯರು ಕೊರೊನಾ ಬೇಗ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗ ಎಂದು ಗೊತ್ತಿದ್ದರೂ ಅದನ್ನು ಲೆಕ್ಕಿಸದೇ ಸುಮಾರು 9 ತಿಂಗಳುಗಳ ಕಾಲ ನಿತ್ಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಎಷ್ಟೋ ನರ್ಸ್ಗಳು ವೈದ್ಯರು ಮನೆಗೆ ಹೋಗುತ್ತಿರಲಿಲ್ಲ, ಹೋದರೂ ತಮ್ಮ ಮಕ್ಕಳನ್ನು ಮುದ್ದಾಡುತ್ತಿರಲಿಲ್ಲ. ಬೇರೆ ರೂಮ್ ನಲ್ಲಿ ಏಕಾಂಗಿ ವಾಸ ಇರಬೇಕಾಗಿತ್ತು. ಅಂತಹ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎನ್ನುವುದು ಶುಶ್ರೂಷಕಿಯರ ಮನದಾಳದ ಮಾತು.
ಕೊರೊನಾ ಮಹಾಮಾರಿ ವೇಳೆ ವೈದ್ಯಲೋಕ ಹಗಲಿರುಳು ದುಡಿದು ಸಾಕಷ್ಟು ರೋಗಿಗಳಿಗೆ ಜೀವದಾನ ನೀಡಿದೆ. ಕೊರೊನಾ ಹರಡದಂತೆ ಮುನ್ನಚ್ಚರಿಕೆಯನ್ನು ಸಾರ್ವಜನಿಕರಿಗೆ ತಿಳಿಸಿದ ಪರಿಣಾಮ ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ ಕಡಿಮೆ ಆಗಲು ಕಾರಣವಾಯಿತು. ದೇಶದಲ್ಲಿ ಕರ್ನಾಟಕ ಕೊರೊನಾ ನಿಯಂತ್ರಣದಲ್ಲಿ ಮೊದಲು ಸ್ಥಾನಗಳಿಸಿರುವ ಶ್ರೇಯಸ್ಸು ವೈದ್ಯ ಸಿಬ್ಬಂದಿಗೆ ಸಲ್ಲಬೇಕು.