ವಿಜಯಪುರ: ಕೊರೊನಾ ಸೋಂಕಿನ ಎರಡನೇ ಅಲೆಯ ಮಾಹಿತಿಯು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕೊರೊನಾ ಪ್ರಕರಣ ಇಳಿಮುಖವಾಗಿವೆ. ಆದರೆ ಎರಡನೇ ಅಲೆಯಲ್ಲಿ ಈ ಸಂಖ್ಯೆ ಹೆಚ್ಚಾಗಬಹುದೆಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಕೆಲವು ರಾಜ್ಯಗಳ ಜಿಲ್ಲೆಗಳಿಗೆ ತಿಳಿಸಿದೆ. ಆ ಪಟ್ಟಿಯಲ್ಲಿ ವಿಜಯಪುರ ಸಹ ಇದೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೇಜರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೋರಿದರು.
ಪ್ರತಿದಿನ 2 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಗುರಿ ಪೈಕಿ ಶೇ 98ರಷ್ಟು ಪಾಲಿಸಲಾಗಿದೆ ಎಂದರು.
50ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ:
50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಜಿಲ್ಲೆಯ ಪ್ರತಿ ಮನೆಯ ಸರ್ವೆ ಮಾಡಲಾಗಿದೆ. ಮನೆಯಲ್ಲಿ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ತೋರಬಾರದು ಎಂದು ಮನವಿ ಮಾಡಿದರು.
ಕೆಮ್ಮು, ನೆಗಡಿ, ಜ್ವರ ಇದ್ದವರು ಯಾವುದೇ ಆಸ್ಪತ್ರೆಗೆ ಹೋದರೂ ಅವರ ಮಾಹಿತಿ ಜಿಲ್ಲಾಡಳಿತ ಪಡೆದುಕೊಳ್ಳುತ್ತಿದೆ. ಅಂಥವರು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಜಿಲ್ಲಾಡಳಿತ ಅವರ ಮನೆ ಬಾಗಿಲಿಗೆ ಆಗಮಿಸಿ ಕೋವಿಡ್ ಟೆಸ್ಟ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೆಗಟಿವ್ ಗ್ರೂಪ್:
ಕಾಲೇಜು ಆರಂಭಗೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವದು ಕಡ್ಡಾಯಗೊಳಿಸಲಾಗಿದೆ. ಕಾಲೇಜು ಮುಖ್ಯಸ್ಥರ ವಾಟ್ಸ್ಪ್ ಗ್ರೂಪ್ ಸಹ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿ ಟೆಸ್ಟ್ ಮಾಡಿಸಿಕೊಂಡ ಮೇಲೆ ಅವರ ಟೆಸ್ಟ್ ನೆಗಟಿವ್ ಬಂದರೆ ಅಂಥವರ ಹೆಸರು ಕಾಲೇಜ್ ಮುಖ್ಯಸ್ಥರಿಗೆ ನೀಡಲಾಗುವುದು. ಅಂಥ ವಿದ್ಯಾರ್ಥಿಗಳನ್ನು ಕಾಲೇಜ್ಗೆ ತಕ್ಷಣ ಸೇರಿಸಿಕೊಳ್ಳಬೇಕು. ಗ್ರೂಪ್ ನಲ್ಲಿ ಹೆಸರು ಬರದಿದ್ದರೆ ಅಂಥ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ ಅಂಥ ಅರ್ಥ. ಅವರನ್ನು ಹಾಗೂ ಅವರ ಸಂಪರ್ಕದಲ್ಲಿ ಇರುವವರಿಗೆ ಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು ಎಂದರು.