ವಿಜಯಪುರ: ಸೋಂಕು ದೃಢಪಟ್ಟಿದ್ದ 17 ವರ್ಷದ (ರೋಗಿ ಸಂಖ್ಯೆ-8306) ತಂಗಿ ತನ್ನ ಅಕ್ಕನ ನಿಶ್ಚಿತಾರ್ಥದಲ್ಲಿ ಓಡಾಡಿದ್ದ ಕಾರಣ ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಆತಂಕ ಎದುರಾಗಿದೆ.
ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ತಂಗಿಗೆ ಮೊದಲೇ ಕೊರೊನಾ ಸೋಂಕು ತಗುಲಿತ್ತಂತೆ. ಆದರೆ ಆಕೆಗೆ ಸೋಂಕು ತಗುಲಿರುವುದು ಗೊತ್ತಿರಲಿಲ್ಲ. ನಿಶ್ಚಿತಾರ್ಥದ ಬಳಿಕ ಪಾಸಿಟಿವ್ ವರದಿ ಬಂದಿದೆ. ನಿಶ್ಚಿತಾರ್ಥಕ್ಕೂ ಮೊದಲು ಕೆಮ್ಮು, ಶೀತ, ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು.
ಈ ವೇಳೆ ಚಿಕಿತ್ಸೆ ನೀಡಿ ಸ್ವ್ಯಾಬ್ ಸಂಗ್ರಹಿಸಿ ಹೋಮ್ ಕ್ವಾರಂಟೈನ್ ಆಗುವಂತೆ ವೈದ್ಯರು ತಿಳಿಸಿದ್ದರಂತೆ. ಆದರೆ ಮಾರನೇ ದಿನವೇ ನಡೆದ ಅಕ್ಕನ ನಿಶ್ಚಿತಾರ್ಥದಲ್ಲಿ ತಂಗಿಯದ್ದೇ ದರ್ಬಾರ್ ಆಗಿತ್ತು. ನಿಶ್ಚಿತಾರ್ಥದ ಮಾರನೇ ದಿನ ಬಂದ ವರದಿಯಲ್ಲಿ ಕೊರೊನಾ ದೃಢವಾಗಿತ್ತು. ಈಗ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದ 150ಕ್ಕೂ ಹೆಚ್ಚು ಜನರಿಗೆ ಆತಂಕ ಶುರುವಾಗಿದೆ.
ಈಕೆಯ ಸಂಪರ್ಕಕ್ಕೆ ಬಂದಿದ್ದವರಲ್ಲಿ ಈಗಾಗಲೇ 130 ಜನರ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ. ಉಳಿದವರನ್ನು ಜಿಲ್ಲಾಡಳಿತ ಹುಡುಕುತ್ತಿದೆ. ಸೋಂಕಿತೆಯ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.