ವಿಜಯಪುರ : ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಯುವ ಸಮಿತಿ ಅಧ್ಯಕ್ಷ ಮಹ್ಮದ್ ನಲಪಾಡ್ ಹರಿಹಾಯ್ದರು. ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಗೂ ಮುನ್ನ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಪಾಕೆಟ್ನಿಂದ ಹಣ ಪಡೆದು ಖಾಸಗಿ ಕಂಪನಿಗಳಿಗೆ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಖಂಡಿಸಲು ರಾಜ್ಯದ ಯುವಕರು ಒಂದಾಗಬೇಕೆಂದು ಕರೆ ನೀಡಿದರು.
ಬೆಲೆ ಏರಿಕೆಯನ್ನು ವಿರೋಧಿಸಿ ಜಿಲ್ಲಾ ಕೇಂದ್ರದಿಂದ ಹಿಡಿದು ಬ್ಲಾಕ್‌ಮಟ್ಟದವರೆಗೂ ಪ್ರತಿಭಟನೆ ನಡೆಸೋದಾಗಿ ಹೇಳಿದರು. ನಾನೊಬ್ಬ ಮುಸಲ್ಮಾನನಾಗಿ ದೇವಸ್ಥಾನಕ್ಕೆ ಬಂದಿದ್ದೇನೆ. ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು. ನಾವೆಲ್ಲಾ ಜೊತೆಗಿರಬೇಕೆಂದು ತಿಳಿಸಿದರು. ಕುರಾನ್, ಬೈಬಲ್, ಭಗವದ್ಗೀತೆ ನಮ್ಮ ಸಂವಿಧಾನ. ಆದ್ರೆ, ಬೆಲೆಯೇರಿಕೆ, ತನ್ನ ವೈಫಲ್ಯ ಮುಚ್ಚಲು ಬಿಜೆಪಿ ಕೋಮುವಾದ ಹರಡುತ್ತಿದೆ. ಬಿಜೆಪಿಯವರ ಕೋಮುವಾದ ಯಶಸ್ವಿಯಾಗಲ್ಲ ಎಂದರು.
ಆರಗ ಜ್ಞಾನೇಂದ್ರ ಅರ್ಧ ಜ್ಞಾನದವರು : ಬೆಂಗಳೂರು ಯುವಕ ಚಂದ್ರು ಕೊಲೆ ಕುರಿತು ಪ್ರತಿಕ್ರಿಯಿಸಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನದವರು. ಇಡೀ ಜ್ಞಾನ ಇದ್ದಿದ್ದರೆ ಅವರು ಅಂತಹ ಮಾತು ಹೇಳುತ್ತಿರಲಿಲ್ಲ. ಜ್ಞಾನವೇ ಇಲ್ಲದಿದ್ದರೆ ಪರವಾಗಿರಲಿಲ್ಲ. ಆದ್ರೆ, ಅವರ ಬಳಿ ಅರ್ಧಜ್ಞಾನ ಇದೆ ಎಂದು ಟಾಂಗ್ ನೀಡಿದರು. ಹಿಜಾಬ್, ಹಲಾಲ್, ಆಜಾನ್ ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದು ಅವರ ಬೇಜವಾಬ್ದಾರಿಯಾಗಿದೆ.
ಹೋಂ ಮಿನಿಸ್ಟರ್ ಆಗಿರೋದಕ್ಕೆ ನೈತಿಕತೆ ಇಲ್ಲ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಿದರೂ ದೂರು ದಾಖಲಾಗಿಲ್ಲ. ಕೋರ್ಟ್ ಮೂಲಕ ದೂರು ದಾಖಲಿಸುತ್ತೇವೆ. ಅವರ ಮೇಲೆ ಎಫ್ಐಆರ್ ಆಗಲೇಬೇಕು ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಬಡವರ ಹಣ ಲೂಟಿ ಹೊಡೆಯುತ್ತಿದೆ: ನಲಪಾಡ್ ಆಕ್ರೋಶ
ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ, ನಾಯಕರ ನಡುವೆ ಸಿಎಂ ಕುರ್ಚಿಗಾಗಿ ಕಚ್ಚಾಟವಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ನಲಪಾಡ್, ನಾನು ಯುವ ಕಾಂಗ್ರೆಸ್ ಅಧ್ಯಕ್ಷ. ಫ್ಲ್ಯಾಗ್ ಕಟ್ಟೋದು, ಪಕ್ಷ ಕಟ್ಟೋದು ನನ್ನ ಕೆಲಸ. ಫ್ಲ್ಯಾಗ್, ಪಕ್ಷ, ಜನರ ಬಗ್ಗೆ ನನಗೆ ಗೊತ್ತು. ದೊಡ್ಡ ನಾಯಕರ ಬಗ್ಗೆ ಗೊತ್ತಿಲ್ಲವೆಂದು ಜಾಣ್ಮೆಯ ಉತ್ತರ ನೀಡಿದರು.
ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ : ಇದಕ್ಕೂ ಮುನ್ನ ಮುಖಂಡರೊಂದಿಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿದ ನಲಪಾಡ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇತ್ತೀಚಿಗೆ ನಡೆಯುತ್ತಿರುವ ಜಾತಿ, ಧರ್ಮ ವಿವಾದಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು. ನಂತರ ದೇವರ ತೀರ್ಥ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರು.