ವಿಜಯಪುರ: ಜಿಲ್ಲೆಯ ಇಂಡಿ ತಾಲೂಕು ಸೇರಿದಂತೆ ಈ ಭಾಗರದಲ್ಲಿ ನೀರಾವರಿಗಾಗಿ ಹಲವು ಯೋಜನೆಗಳನ್ನು ಕಲ್ಪಿಸಿದ್ದರೂ ಕಾಲುವೆಯ ಕೊನೆ ಭಾಗಕ್ಕೆ ಪ್ರಾಮಾಣಿಕವಾಗಿ ನೀರು ತಲುಪಿಸುವಲ್ಲಿ ಆಡಳಿತ ಯಂತ್ರ ವಿಫಲವಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಬಹುತೇಕ ಹಳ್ಳಿಗಳು ಕುಡಿಯುವ ನೀರಿನ ಯೋಜನೆ ಕಾಲುವೆ ನೀರು ಆಧರಿಸಿವೆ. ಜಲಾಶಯಗಳಲ್ಲಿ ಸಂಗ್ರಹ ಇರುವ ನೀರಿನ ನಿರ್ವಹಣೆ ಹಾಗೂ ಸಮರ್ಪಕ ಬಳಕೆ ವಿಷಯದಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಯಾವುದೇ ಸರ್ಕಾರ ಇರಲಿ, ನೀರಿನ ವಿಚಾರದಲ್ಲಿ ರಾಜಕೀಯ ಅನರ್ಥ. ನಮ್ಮ ಕ್ಷೇತ್ರಕ್ಕೆ ಕುಡಿಯುವ ನೀರು ಸಿಗದಿದ್ದರೆ ಯಾವ ಉದ್ದೇಶಕ್ಕಾಗಿ ನಾನು ಶಾಸಕನಾಗಿರಬೇಕು? ಎಂದು ಪ್ರಶ್ನಿಸಿದರು.
ನೀರು ಸೇರಿದಂತೆ ಅಭಿವೃದ್ಧಿ ದೃಷ್ಟಿಯಿಂದ ಇಂಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು. ಈ ಕೂಗು ಬಹಳ ದಶಕಗಳ ಹಿಂದಿನದ್ದು. ನಾನು ಕೂಡ ಕ್ಷೇತ್ರದ ಜನರರಿಗೆ ಮಾತು ಕೊಟ್ಟಿದ್ದೇನೆ. 2028ರ ವರೆಗೂ ಅವಕಾಶವಿದೆ. ಹೊಸ ಜಿಲ್ಲೆಯಾಗಿ ಮಾಡಿದರೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ. ನಮ್ಮ ಬೇಡಿಕೆ ಈಡೇರದಿದ್ದರೆ 2028ರ ವಿಧಾನಸಭಾ ಚುನಾವಣೆಗೆ ನಾನು ರಾಜಕೀಯದಲ್ಲಿ ಇರುವುದಿಲ್ಲ. ಸದ್ಯಕ್ಕೆ ನಮ್ಮ ಈ ಬೇಡಿಕೆಗೆ ಸರ್ಕಾರ ಕೂಡ ಸಕಾರಾತ್ಮವಾಗಿ ಒಪ್ಪಿದೆ ಎಂದರು.
ಮೈಕ್ರೋ ಮ್ಯಾನೇಜ್ಮೆಂಟ್ ಆಡಳಿತ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಅನುಕೂಲ. ಹಳೆ ಧಾರವಾಡ ಜಿಲ್ಲೆಯಿಂದ ಗದಗ ಹಾಗೂ ಹಾವೇರಿ ಜಿಲ್ಲೆ ಮಾಡಲಾಗಿದೆ. ಬೆಂಗಳೂರಿನಿಂದ ರಾಮನಗರ, ದಕ್ಷಿಣ ಕನ್ನಡದಿಂದ ಉಡುಪಿ, ಇತ್ತೀಚೆಗೆ ಬಳ್ಳಾರಿಯಿಂದ ವಿಜಯನಗರ ಕೂಡ ಜಿಲ್ಲೆಯಾಗಿದೆ. ಅದೇ ರೀತಿ ನಮ್ಮ ಇಂಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು. ಜನಸಂಖ್ಯೆ, ಭೂಪ್ರದೇಶ ಕಡಿಮೆ ಇರುವ ನಗರ ಜಿಲ್ಲೆಯಾಗಿವೆ. ಇಂಡಿ ಎಲ್ಲ ಆಯಾಮದಿಂದಲೂ ಹೆಚ್ಚಿದೆ. ಅಭಿವೃದ್ಧಿ ದೃಷ್ಟಿಯಿಂದ ಮರಭೂಮಿ ಪ್ರದೇಶ ರಾಜಸ್ಥಾನದಲ್ಲಿಯೂ ಹೆಚ್ಚುವರಿ ಜಿಲ್ಲೆಗಳನ್ನು ಮಾಡಲಾಗಿದೆ. ಅದೇ ಮಾನದಂಡ ಇಟ್ಟುಕೊಂಡು ಇಲ್ಲಿಯೂ ಮಾಡಬೇಕು. ನಾವೂ ಕೂಡ ಮರಭೂಮಿ ಪ್ರದೇಶಲ್ಲಿದ್ದೇವೆ. ನಮ್ಮ ಭಾಗದ ಸಂಕಷ್ಟಗಳನ್ನು ಆಲಿಸಲು ಒಂದು ಜಿಲ್ಲಾಡಳಿತ ಬೇಕು. ರಾಜ್ಯದಲ್ಲಿ ಅತಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಜಿಲ್ಲೆ ಯಾವುದೆಂದರೆ ವಿಜಯಪುರದ ಇಂಡಿ ತಾಲೂಕು. ಕೊನೆಯ ಭಾಗದಲ್ಲಿರುವ ಇಂಡಿಗೆ ಕೇವಲ ಯೋಜನೆಗಳು ಮಾತ್ರ ಬಂದಿವೆ, ಸಮರ್ಪಕ ಕುಡಿಯುವ ನೀರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಮುಂದೆ ಈ ವಿಚಾರ ಪ್ರಸ್ತಾಪವಿಲ್ಲ. ಸಿಎಂ ಬದಲಾವಣೆಯ ಕುರಿತು ನೀವು ಕೇಳಬಾರದು, ನಾನು ಹೇಳಬಾರದು. ನಿನ್ನೆಯೇ ಗೆದ್ದು ಇಲ್ಲಿ ಬಂದಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಯಾಕೆ ಈ ಪ್ರಶ್ನೆ ಬರುತ್ತವೆ, ಯಾಕೆ ಈ ಪ್ರಶ್ನೆ ಉದ್ಭವ ಆಗುತ್ತವೆ, ಇದೆಲ್ಲ ಬರಬಾರದು ಎಂದರು.
ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂಬ ಪ್ರಧಾನಿ ಮೋದಿ ಆರೋಪ ವಿಚಾರಕ್ಕೆ, ಮೋದಿ ಅವರಿಗೆ ಆ ರೀತಿ ಅನ್ನಿಸಿರಬೇಕು. ಆದರೆ, ಹಾಗೇನು ಇಲ್ಲ. ಸಿಎಂ ಸಿದ್ದರಾಮಯ್ಯನವರಂತ ಪ್ರಾಮಾಣಿಕ ಶುದ್ಧ ಹಸ್ತರು ಯಾರು ಇಲ್ಲ. ಪ್ರಧಾನಿ ಹೇಳಿಕೆ ರಾಜಕೀಯ ಪ್ರೇರಿತ. ಆದರೆ, ವಾಸ್ತವವಲ್ಲ. ಮೋದಿ ಅವರು ಮಧ್ಯಪ್ರದೇಶದಲ್ಲಿಯೂ ಸಿದ್ದರಾಮಯ್ಯನವರ ಹೆಸರು ಹೇಳುತ್ತಾರೆಂದರೆ ಸಿದ್ದರಾಮಯ್ಯ ಜನಪ್ರಿಯತೆಯನ್ನು ನಾವು ಗಮನಿಸಬೇಕು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕಾರಣ ಮೋದಿಯವರು ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳುತ್ತಿರಬಹುದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರು, ಭಯೋತ್ಪಾದಕರ ಧೈರ್ಯ ಹೆಚ್ಚಳ; ಪ್ರಧಾನಿ ಮೋದಿ