ವಿಜಯಪುರ: ಜಿಲ್ಲೆಯ 1,045 ಜನವಸತಿ ಕೇಂದ್ರಗಳಿಗೆ ನೀರು ಪೂರೈಸುವ ಒಟ್ಟು 1859.76 ಕೋಟಿ ರೂ.ಗಳ ಯೋಜನಾ ವೆಚ್ಚದ ಜಲಧಾರೆ ವಿಶೇಷ ಯೋಜನಾ ವರದಿ ಸಿದ್ಧಪಡಿಸಿದ್ದು, ಎಲ್ಲಾ ಜನಪ್ರತಿನಿಧಿಗಳಿಂದ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಹಾಗೂ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಜಲಧಾರೆ ಯೋಜನೆ ಅಭಿಪ್ರಾಯ ಸಂಗ್ರಹಣೆ ಕುರಿತು ವಿಡಿಯೋ ಸಂವಾದ ನಡೆಸಿದ ಅವರು, ಈಗಾಗಲೇ ಈ ಯೋಜನೆಗೆ ಸಂಬಂಧಪಟ್ಟಂತೆ ಡಿಪಿಆರ್ ಸಿದ್ಧಗೊಂಡಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವ ಮುನ್ನಾ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಮತ್ತು ಇತರೆ ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಗಳ ಅಭಿಪ್ರಾಯ, ಸಲಹೆ ಸೂಚನೆ ಪಡೆಯುತ್ತಿದ್ದು, ನಂತರ ನಿಯೋಜಿಸಿದ ಸಮಿತಿ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಹೇಳಿದರು.
ಜಲಧಾರೆ ಯೋಜನೆಯಡಿ ವಿವಿಧ ಗ್ರಾಮಗಳು ಹಾಗೂ ನಿಗದಿತ ಪಟ್ಟಣಗಳವರೆಗೆ ನೀರು ಲಭ್ಯವಾಗಲಿದ್ದು, ವಿವಿಧ ಗ್ರಾಮಗಳಿಗೆ ಆಂತರಿಕವಾಗಿ ಮನೆ ಮನೆಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯ 5 ತಾಲೂಕುಗಳಾದ ಇಂಡಿ, ಸಿಂದಗಿ, ಬಸಬನ ಬಾಗೇವಾಡಿ, ವಿಜಯಪುರ ಹಾಗೂ ಮುದ್ದೇಬಿಹಾಳ ತಾಲೂಕುಗಳ 1045 ಜನ ವಸತಿ ಪ್ರದೇಶಗಳಿಗೆ ಮತ್ತು ಜಿಲ್ಲೆಯ 11 ನಗರ ಸ್ಥಳೀಯ ವ್ಯಾಪ್ತಿಯ ಪಟ್ಟಣಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಯನ್ನು 2052ರ ಜನಸಂಖ್ಯೆ ಆಧಾರದ ಮುಂದಾಲೋಚನೆಯೊಂದಿಗೆ ಜಾರಿಗೊಳಿಸಲಾಗುತ್ತಿದ್ದು, 2011ರ ಜನಗಣತಿ ಅನ್ವಯ 2022ರ ಅವಧಿಗೆ 17.77 ಲಕ್ಷ, 2037ರ ಅವಧಿಗೆ 20.59 ಲಕ್ಷ ಹಾಗೂ 2052ರ ಅವಧಿಗೆ 23.42 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸುವ ಯೋಜನಾ ವರದಿಯನ್ನು ಸ್ತುಪ ಕನ್ಸಲ್ಟಂಟ್ ವತಿಯಿಂದ ಸಿದ್ಧಪಡಿಸಲಾಗಿದೆ. 2022ಕ್ಕೆ 1.58 ಟಿಎಂಸಿ, 2037ಕ್ಕೆ 1.83 ಟಿಎಂಸಿ ಹಾಗೂ 2052ಕ್ಕೆ 2.08 ಟಿಎಂಸಿ ನೀರಿನ ಅವಶ್ಯಕತೆಯ ಬಗ್ಗೆ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ವಿಡಿಯೋ ಸಂವಾದದ ಮೂಲಕ ಜಿಲ್ಲೆಯನ್ನು ವಲಸಿಗ ಸಮುದಾಯ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧಿಕೃತ ಜನಸಂಖ್ಯೆ ಅಂಕಿ-ಅಂಶ ಸಂಗ್ರಹಣೆಗೆ ಹಾಗೂ ಗ್ರ್ಯಾವಿಟಿ ಮೂಲಕ ನೀರು ಪೂರೈಕೆಯ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಅವರ ಗಮನಕ್ಕೆ ತಂದು ಸಮಗ್ರ ಸಾಧಕ ಬಾಧಕಗಳ ಬಗ್ಗೆ ಅಭಿಪ್ರಾಯ ಪಡೆಯುವಂತೆ ತಿಳಿಸಿ, ಯೋಜನೆ ಜಾರಿಗಾಗಿ ರೈತರ ಸಹಕಾರ, ಭೂಸ್ವಾಧೀನ ಪರಿಹಾರ ಮತ್ತು ಪೈಪ್‍ಲೈನ್ ಅಳವಡಿಸುವ ಸಂದರ್ಭದಲ್ಲಿ ಬರಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಭಾವಿಯಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.