ಮುದ್ದೇಬಿಹಾಳ (ವಿಜಯಪುರ) : ಸಮಾಜ ವಿರೋಧಿ ಚಟುವಟಿಕೆ ತಡೆಗಟ್ಟಲು ಸಿಸಿಟಿವಿಗಳು ತುಂಬ ಸಹಕಾರಿಯಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಸಿಸಿಟಿವಿ ಕಾರ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆಯಿಂದ ಮಾಡುತ್ತಿದ್ದೇವೆ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಒತ್ತು ನೀಡಲಾಗಿತ್ತು.ಆದರೆ, ಕೊರೊನಾ ಹಾವಳಿ ಮಧ್ಯದಲ್ಲಿ ಈ ಯೋಜನೆಗೆ ಕೆಲಕಾಲ ನಿಲ್ಲಿಸಿದ್ದೆವು. ಆದರೆ, ಇದೀಗ ಸಾರ್ವಜನಿಕರನ್ನು ಭೇಟಿ ಮಾಡುತ್ತಿರುವ ನಮ್ಮ ಅಧಿಕಾರಿಗಳು ಗಣ್ಯರು,ಸಂಘ ಸಂಸ್ಥೆಗಳ ಮುಖಂಡರ ಮನವೊಲಿಸಿ ಸಿಸಿಟಿವಿ ಹಾಕಲು ಸಹಕಾರ ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಊರಿನ ಮುಖ್ಯದ್ವಾರ, ನಿರ್ಗಮನ ದ್ವಾರ ಹಾಗೂ ಆಯಕಟ್ಟಿನ ಜಾಗೆಗಳಲ್ಲಿ ಸಿಸಿಟಿವಿ ಹಾಕಲಾಗುತ್ತಿದೆ.ಇದರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ.ಈಚೆಗೆ ಮುದ್ದೇಬಿಹಾಳದಲ್ಲಿ ಸಣ್ಣ ಕಳ್ಳತನ ಆದರೂ ೩೦-೪೦ ಸಾವಿರ ರೂ.ಹೋಗಿರುತ್ತದೆ.ಆದ್ದರಿಂದ ಸಾರ್ವಜನಿಕರು ಅದರ ಅರ್ಧದಷ್ಟು ಹಣ ಖರ್ಚು ಮಾಡಿ ಸಿಸಿಟಿವಿ ಮನೆಯಲ್ಲಿ ಹಾಕಿಕೊಂಡರೆ ಕಳ್ಳತನದ ಭಯದಿಂದ ಮುಕ್ತರಾಗಬಹುದಾಗಿದೆ ಎಂದರು.