ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾ.ಪಂ. ಸದಸ್ಯರೊಬ್ಬರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ, ಅಧ್ಯಕ್ಷ ಸ್ಥಾನ ಆಯ್ಕೆಗೆ ಒಂದು ದಿನ ಬಾಕಿ ಇರುವಂತೆ ಸದಸ್ಯರೊಬ್ಬರು ಪ್ರಮಾಣಪತ್ರ ರದ್ದುಗೊಳಿಸಲು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದು, ಅದಕ್ಕೆ ಉತ್ತರ ನೀಡಿರುವ ಅಧಿಕಾರಿಗಳು ಪ್ರಮಾಣ ಪತ್ರ ರದ್ದುಗೊಳಿಸುವುದು ಅಸಾಧ್ಯ. ತಾವು ಮೇಲ್ಮನವಿ ಸಲ್ಲಿಸಬಹುದು ಎಂದು ಹಿಂಬರಹ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಕುಂಟೋಜಿ ಗ್ರಾ.ಪಂ. ಸದಸ್ಯ ಶಿವಬಸ್ಸು ಸಜ್ಜನ ಅವರಿಗೆ ಹಿಂದುಳಿದ ವರ್ಗ ಬ ಪ್ರಮಾಣಪತ್ರ ನೀಡದಂತೆ ಎನ್.ಎಂ. ಬಾಗೇವಾಡಿ ತಹಶೀಲ್ದಾರ್‌ಗೆ ಜ.30 ರಂದು ಪತ್ರ ಬರೆದು ಮನವಿ ಮಾಡಿದ್ದರು. ಶಿವಬಸ್ಸು ಸಜ್ಜನ ಅವರು ಗಾಣಿಗ ಸಮಾಜಕ್ಕೆ ಸೇರಿದ್ದು, ಈಗಾಗಲೇ ಹಿಂದುಳಿದ ವರ್ಗದ ಅ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಆದರೆ ಈಗ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ಹಿಂದುಳಿದ ವರ್ಗ ಬ ಇದ್ದು, ಸದರಿಯವರು ಹಿಂದುಳಿದ ವರ್ಗ ಬ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸದರಿಯವರ ಜಾತಿಯ ಬಗ್ಗೆ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜಿಸ್ಟರ್ ನಂಬರ್ 1 ರಲ್ಲಿ ಪರಿಶೀಲನೆ ನಡೆಸಬೇಕು. ಗಾಣಿಗ ಸಮಾಜವು ಪ್ರವರ್ಗ 2ಅ ರಲ್ಲಿ ಬರುವುದರಿಂದ ಶಿವಬಸ್ಸು ಸಜ್ಜನ ಅವರಿಗೆ ಹಿಂದುಳಿದ ಬ ವರ್ಗದ ಪ್ರಮಾಣಪತ್ರ ನೀಡಬಾರದು ಎಂದು ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ತಹಶೀಲ್ದಾರರು, ಜ. 25ರಂದು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವರದಿ ಅನ್ವಯ ಹಾಗೂ ದಾಖಲೆಗಳ ಪ್ರಕಾರ ಹಿಂದುಳಿದ ಬ ವರ್ಗದ ಪ್ರಮಾಣಪತ್ರ ನೀಡಿದ್ದು, ಈ ಬಗ್ಗೆ ಉಪ ವಿಭಾಗಾಧಿಕಾರಿಗಳಲ್ಲಿ ಮೇಲ್ಮನವಿ ಹೋಗಬಹುದಾಗಿದೆ ಎಂದು ತಿಳಿಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ. ಏತನ್ಮಧ್ಯೆ ಮತ್ತೆ ಫೆ.೨ ರಂದು ಶಿವಬಸಪ್ಪ ಸಜ್ಜನ ಅವರಿಗೆ ಬೇವೂರ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವರ್ಗಾವಣೆ ಪ್ರಮಾಣ ಪತ್ರದ ಪ್ರಕಾರ ಹಿಂದು ಲಿಂಗಾಯತ ಅಂತ ವರದಿ ಸಲ್ಲಿಸಿರುತ್ತಾರೆ. ಕುಂಟೋಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಪಂಚನಾಮ ಜವಾಬದೊಂದಿಗೆ ಜಾತಿ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಈ ಗ್ರಾಮ ಪಂಚಾಯತ್ನಲ್ಲಿ ಪತಿ ಜವಾನ, ಪತ್ನಿಯೇ ಅಧ್ಯಕ್ಷೆ: ಹೇಗಿದೆ ವಾತಾವರಣ?
ಬುಧವಾರ ಸಂಜೆ ಮತ್ತೆ ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ನಾಡಗೌಡ, ಮುಖಂಡ ಮಲ್ಲಿಕಾರ್ಜುನ ಬಾಗೇವಾಡಿ ಸಜ್ಜನ ಅವರ ಜಾತಿ ಪ್ರಮಾಣ ಪತ್ರವನ್ನು ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದು, ಇಂದು ಬೆಳಗ್ಗೆ ಏನಾಗಲಿದೆಯೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.