ವಿಜಯಪುರ: ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡುವವರ ಗೌರವ ಕಡಿಮೆಯಾಗುತ್ತದೆಯೇ ಹೊರತು ಸಂಘಕ್ಕೆ ಯಾವುದೇ ಹಾನಿಯಾಗುವುದಿಲ್ಲ. ರಾಷ್ಟ್ರಪತಿಗಳು, ಪ್ರಧಾನಿಗಳು ಹಾಗೂ ನಾನು ಸಹ ಸಂಘ ಪರಿವಾರದಿಂದ ಬಂದವರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಅವರು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಎಸ್ಎಸ್ ಅಧಿಕೃತ ಸಂಘವೇ? ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆಗೆ ತಿರುಗೇಟು ನೀಡಿದರು. ಸಂಘ ಪರಿವಾರದ ಬಗ್ಗೆ ಮಾತನಾಡುವ ನೈತಿಕತೆ ಹೆಚ್ಡಿಕೆಗೆ ಇಲ್ಲ. ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲವೆಂದರು.
ಬಿಜೆಪಿಯ 'ಬಿ' ಟೀಂ ಆಗಿ ಜೆಡಿಎಸ್ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಸುಳ್ಳು, ಮಾಜಿ ಪ್ರಧಾನಿ ದೇವೇಗೌಡರು ಕ್ಷೇತ್ರದಲ್ಲಿದ್ದು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.
ಎಲ್ಲಾ ಪಕ್ಷದ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರ ಮತದಾರ ಪ್ರಭುಗಳ ಕೈಯಲ್ಲಿ ಇದೆ. ಸದ್ಯಕ್ಕೆ ಬಿಜೆಪಿಯ ಉತ್ತಮ ಆಡಳಿತ ನೋಡಿ ಎರಡೂ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ.15 ರ ನಂತರ ರಾಜ್ಯ ಪ್ರವಾಸ:
ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ರಾಜ್ಯ ಪ್ರವಾಸವನ್ನು ಮುಂದೂಡಲಾಗಿದೆ. ನವೆಂಬರ್ 15 ರ ನಂತರ ಪ್ರವಾಸ ಕೈಗೊಂಡು ಪ್ರತಿ ಕ್ಷೇತ್ರಗಳಿಗೆ ತೆರಳಿ, ಪಕ್ಷ ಬಲವರ್ಧನೆ ಮಾಡಿ, ಮುಂದಿನ ಚುನಾವಣೆಯಲ್ಲಿ 140 ಕ್ಕೂ ಅಧಿಕ ಸೀಟ್ ಪಡೆಯುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ:
ತಮ್ಮ ಮತ್ತು ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ಎಲ್ಲಾ ಸಮುದಾಯದ ಅಭಿವೃದ್ಧಿಗೆ ಸಮಾನವಾಗಿ ಯೋಜನೆಗಳನ್ನು ರೂಪಿಸಿದ್ದೇನೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾದ ಒಂದು ಉದಾಹರಣೆ ಇದ್ದರೆ ಹೇಳಿ ಎಂದು ಪುನರುಚ್ಚಸಿದರು.