ವಿಜಯಪುರ: ರಾಮನಗರದಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆ ನಡೆಸುತ್ತಿದೆ. ಇದರಲ್ಲಿ ನಮ್ಮ ಪೊಲೀಸ್ ಇಲಾಖೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲವೆಂದು ಗೃಹ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಐಎ ಅಧಿಕಾರಿಗಳು ಕೇಳಿದ ಸಹಕಾರ ನೀಡೋದು ಮಾತ್ರ ನಮ್ಮ ಕೆಲಸ. ಎನ್ಐಎ ಅವರು ಕೇಳಿದಂತೆ ಅವರಿಗೆ ಕಚೇರಿ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ, ನಿನ್ನೆ ಸಿಐಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಮಾಡಲಾಗಿದೆ ಎಂದರು.
ಜಿಂದಾಲ್ಗೆ ಭೂಮಿ ಹಂಚಿಕೆ:
ಇನ್ನು ಜಿಂದಾಲ್ಗೆ ಭೂಮಿ ಪರಭಾರೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿಗೆ ಮರಳಿದ ಮೇಲೆ ಮೊದಲ ಸಭೆ ನಡೆಸುತ್ತೇನೆ. ಸಚಿವ ಸಂಪುಟ ಉಪಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು ನಿನ್ನೆಯ ಸಿಎಂ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಬಿಜೆಪಿ ಶಾಸಕ ಶಿವನಗೌಡ ನಾಯಕ ಮತ್ತು ಬಿಜೆಪಿಯವರಿಗೆ ಈ ಗ್ರಾಮ ವಾಸ್ತವ್ಯದ ಬಗ್ಗೆ ಅಸೂಯೆ ಇದೆ. ಹಾಗಾಗಿ ಅವರ ಕುಮ್ಮಕ್ಕಿನಿಂದ ಈ ರೀತಿ ನಡೆದಿದೆ ಎಂದು ಸಚಿವ ಎಂ ಬಿ ಪಾಟೀಲ್ ಆರೋಪಿಸಿದ್ರು.
ಔರಾದ್ಕರ್ ವರದಿ ಜಾರಿ:
ಶೀಘ್ರದಲ್ಲೇ ಪೊಲೀಸರಿಗೆ ಸಿಹಿ ಸುದ್ದಿ ನೀಡ್ತೇವಿ ಎಂದ ಸಚಿವ ಪಾಟೀಲ್ ಅವರು, ಔರಾದ್ಕರ್ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಔರಾದ್ಕರ್ ವರದಿ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ರು.