ವಿಜಯಪುರ : "ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ತಪ್ಪಲ್ಲ. ಆದರೆ ಮನೆಯಲ್ಲಿ ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಪುಕ್ಸಟ್ಟೆ ಬಸ್ ಎಂದು ಹೆಣ್ಣು ಮಕ್ಕಳು ದಿನ ಮಗಳ ಊರಿಗೆ, ಅಪ್ಪನ ಊರಿಗೆ, ಅವ್ವನ ಊರಿಗೆಂದು ಅಡ್ಡಾಡುತ್ತಿದ್ದಾರೆ" ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಜನರನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ನಿಂದ ಈ ಕೆಲಸ: ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಫ್ರೀ ಯೋಜನೆಗಳು ಲೋಕಸಭೆ ಚುನಾವಣೆಗೆ ಮಾತ್ರ. ಚುನಾವಣೆಯ ಬಳಿಕ ಫ್ರೀ ಕಟ್ ಮಾಡ್ತಾರೆ ನೋಡಿ. ಜನರನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ" ಎಂದರು.
ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಶಾಸಕರ ನಿಯೋಗ
'ಯಾವ ಸಮಾಜದ ಮನಸ್ಸಿಗೂ ನೋವಾಗದಂತೆ ನಡೆದುಕೊಂಡಿದ್ದೇನೆ': ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದೇ ಹೋದರೆ ಊರ ದೇವರು ಸಿದ್ದಪ್ಪಗೆ ಕಾಯಿ ಒಡೆಯುತ್ತೇನೆ. ದೇವರು ಒಳ್ಳೆಯದು ಮಾಡಿದ ಎಂದು ಕೈ ಮುಗಿದು ಆರಾಮಾಗಿ ಮನೆಯಲ್ಲಿ ಇರ್ತೀನಿ. 45 ವರ್ಷ ರಾಜಕಾರಣ ಮಾಡಿದ್ದೇನೆ. ಯಾರೂ ಮಾಡದ ರಾಜಕಾರಣ ನಾನು ಮಾಡಿದ್ದೇನೆ. ದಲಿತನಾಗಿ ಯಾವ ಸಮಾಜದ ಮನಸ್ಸಿಗೂ ನೋವಾಗದಂತೆ ನಡೆದುಕೊಂಡಿದ್ದೇನೆ. ಇವತ್ತಿಗೂ ಹೀಗೇ ಇದ್ದೀನಿ, ಹೀಗೇ ಸಾಯ್ತೀನಿ. ಯಾರಿಗೂ ತೊಂದರೆ ಮಾಡೋಕೆ ಹೋಗಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಯಲ್ಲಿ ಭಾಗಿಯಾದ್ರೆ ಕಠಿಣ ಕ್ರಮ: ಸಚಿವ ಚಲುವರಾಯಸ್ವಾಮಿ
ಸ್ವಪಕ್ಷೀಯರ ವಿರುದ್ಧ ರಮೇಶ್ ಜಿಗಜಿಣಗಿ ವಾಗ್ದಾಳಿ : ಹಿರಿಯರಿಗೆ ಟಿಕೇಟ್ ಕೊಡಲ್ಲ ಎಂದವರ ವಿರುದ್ಧ ಜಿಗಜಿಣಗಿ ಕೆಂಡಾಮಂಡಲವಾದರು. ಹೊಟ್ಟೆ ಉರಿಯುವವರು ಹೀಗೆ ಹೇಳ್ತಾರೆ. ಹಿರಿಯರಿಗೆ ಟಿಕೆಟ್ ಸಿಗಲ್ಲ ಅಂತಾರೆ. ಅದ್ರಲ್ಲಿ ರಮೇಶ್ ಜಿಗಜಿಣಗಿ ಸೇರಿಸಿ ಬೇಕಂತಲೇ ಹೇಳಿಕೆ ನೀಡ್ತಾರೆ ಎಂದು ಸ್ವಪಕ್ಷೀಯರ ವಿರುದ್ಧ ಜಿಗಜಿಣಗಿ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ: ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್ ವಿಡಿಯೋ ವೈರಲ್
ಪ್ರಧಾನ ಮಂತ್ರಿಗಳು ನನಗೆ ಅನ್ಯಾಯ ಮಾಡೋದಿಲ್ಲ: ಅವರಿಗೆ ನನ್ನ ಬಗ್ಗೆ ಹೆದರಿಕೆ ಇದೆ. ಎಲ್ಲಾದ್ರೂ ಸೇರಿ ಟಿಕೆಟ್ ತಗೊಂಡು ಬಿಡ್ತಾನೆ ಎನ್ನುವ ಭಯ ಇದೆ. ಹೀಗಾಗಿ ನನ್ನನ್ನು ಸೇರಿಸಿಕೊಂಡೇ ಹಿರಿಯರಿಗೆ ಟಿಕೆಟ್ ಇಲ್ಲ ಅನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪಾರ್ಟಿ ನನಗೆ ಮೋಸ ಮಾಡೋದಿಲ್ಲ, ನನಗೆ ವಿಶ್ವಾಸವಿದೆ. ಪ್ರಧಾನ ಮಂತ್ರಿಗಳು ನನಗೆ ಅನ್ಯಾಯ ಮಾಡೋದಿಲ್ಲ. ನನಗೆ ಟಿಕೆಟ್ ಕೊಡ್ತಾರೆ, ನಾನೇ ಎಲೆಕ್ಷನ್ಗೆ ನಿಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಟಿಕೆಟ್‌ಗಾಗಿ ಸಂಸದ ಜಿಗಜಿಣಗಿ ಬೇಡಿಕೆ ಇಟ್ಟರು.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ಭೇಟಿಗೆ ವಿಶೇಷ ಅರ್ಥ ಬೇಡ: ಬಸವರಾಜ ಬೊಮ್ಮಾಯಿ