ವಿಜಯಪುರ: ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆದಿದೆ. ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಕೆಎಸ್ಆರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮೇಲೆ ಹಲ್ಲೆ ನಡೆದಿದೆ.
ಕಿಡಿಗೇಡಿಗಳು ವಿಜಯಪುರ ಡಿಪೋಗೆ ಸೇರಿದ ಬಸ್ನ ಕಿಟಕಿ ಗಾಜು ಒಡೆದಿದ್ದಾರೆ. ಬಳಿಕ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ಮಾಡಲಾಗಿದೆ. ಜೂನ್ 3ರ ಮಧ್ಯರಾತ್ರಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಶ್ರೀಶೈಲ ಬಸ್ ನಿಲ್ದಾಣದ ಬಳಿ ವಾಹನ ನಿಲ್ಲಿಸಿದ್ದಾರೆ. ಬಳಿಕ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಬಂದ ಪುಂಡರ ಗುಂಪು ಹಲ್ಲೆ ಮಾಡಿದೆ.
ಓದಿ: ಶ್ರೀಶೈಲ ಯಾತ್ರೆಯಲ್ಲಿದ್ದ ಕರ್ನಾಟಕದ ಭಕ್ತ ಸಾವು
ಈ ವೇಳೆ 10-12 ಜನರ ಪುಂಡರ ಗುಂಪು ಕನ್ನಡಿಗರ ಬಗ್ಗೆ ಅಶ್ಲೀಲ ಪದ ಬಳಸಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ಬಸವರಾಜ್ ಸಹಾಯಕ್ಕಾಗಿ ಕೂಗಾಡಿದ್ದಾರೆ. ಕೂಡಲೇ ಇತರ ಚಾಲಕರು ಹಾಗೂ ನಿರ್ವಾಹಕರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳ ವಿರುದ್ಧ ಶ್ರೀಶೈಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಮಾರ್ಚ್ 31ರ ಯುಗಾದಿ ಸಂದರ್ಭದಲ್ಲಿ ನೀರಿಗಾಗಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಇದೀಗ ಮತ್ತೇ ಕ್ಯಾತೆ ತೆಗೆದು ಈ ದಾಳಿ ಮಾಡಲಾಗಿದೆ.