ವಿಜಯಪುರ: ಬಬಲೇಶ್ವರ ತಾಲೂಕಿನ ಇಟ್ಟಂಗಿಹಾಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಫುಡ್ ಪಾರ್ಕ್ ನಿಯೋಜಿತ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಚಿವರಿಗೆ ಸ್ಥಳೀಯ ಶಾಸಕ ಎಂ.ಬಿ.ಪಾಟೀಲ, ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಬೀಜ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಸಾಥ್ ನೀಡಿದರು. ಬಳಿಕ ಮಾತನಾಡಿದ ಸಚಿವ ಬಿ.ಸಿ.ಪಾಟೀಲ, ಮುಂಬರುವ ಬಜೆಟ್ ನಲ್ಲಿ ಇಟ್ಟಂಗಿಹಾಳ ಫುಡ್ ಪಾರ್ಕ್ ಗೆ ಸೂಕ್ತ ಅನುದಾನ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ಫುಡ್ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳ ಇದಾಗಿದೆ. ಕೇಂದ್ರ ಸರ್ಕಾರದ ಆತ್ಮ ನಿರ್ಭಯ ಯೋಜನೆಯಡಿ ರಾಜ್ಯಕ್ಜೆ 10 ಸಾವಿರ ಕೋಟಿ ರೂ. ಕಾಯ್ದಿರಿಸಲಾಗಿದೆ. ಅದೇ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಅನುದಾನ ಕಾಯ್ದಿರಿಸಿ ಮುಂದಿನ ಬಜೆಟ್ ನಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಮಂಜೂರಾತಿ ದೊರಕಿಸಿಕೊಡಲಾಗುವುದು ಎಂದರು.
ವಿಜಯಪುರದ ಹಿಟ್ನಳ್ಳಿಯಲ್ಲಿ ಇರುವ ಕೃಷಿ ಸಂಶೋಧನಾ ಕೇಂದ್ರವನ್ನು ಮುದ್ದೇಬಿಹಾಳಕ್ಕೆ ಸ್ಥಳಾಂತರ ಮಾಡುವದು ಇನ್ನೂ ಚಿಂತನೆ ಹಂತದಲ್ಲಿ ಇದೆ ಹೊರತು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನದಲ್ಲಿ ಸಿಎಂ ಜತೆ ಚರ್ಚಿಸಿ ಅಗತ್ಯವಿದ್ದರೆ ಮುದ್ದೇಬಿಹಾಳಕ್ಕೆ ಹೊಸ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಶಾಸಕ ಎಂ. ಬಿ. ಪಾಟೀಲ ಮಾತನಾಡಿ, ಫುಡ್ ಪಾರ್ಕ್ ಸ್ಥಾಪನೆಗೆ 76 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಹಾಗೆ ವೈನ್ ಶಾಪ್ ನಿರ್ಮಾಣಕ್ಕೆ 140 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಎರಡು ಸೇರಿ ಒಂದೇ ಒಂದೇ ಕಂಪೌಂಡ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಲಾಭವಾಗಲಿದೆ. ಸರ್ಕಾರ ಮತ್ತೊಮ್ಮೆ ಚಿಂತನೆ ಮಾಡಿ ಒಂದೇ ಕಾಂಪೌಂಡ್ನಲ್ಲಿ ಫುಡ್ ಪಾರ್ಕ್ ಹಾಗೂ ವೈನ್ ಪಾರ್ಕ್ ನಿರ್ಮಿಸಬೇಕು ಎಂದು ಸಚಿವರನ್ನು ಒತ್ತಾಯಿಸಿದರು.