ವಿಜಯಪುರ: ರಾಜ್ಯದ ಭದ್ರತೆ ಹಾಗೂ ಸರ್ಕಾರದ ಪ್ರಮುಖ ಆಸ್ತಿಯಾಗಿರುವ ಸೂಕ್ಷ್ಮ ಕೇಂದ್ರಗಳ ರಕ್ಷಣೆಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆ ರಚನೆ ಮಾಡಲಾಗಿದೆ. ಈ ಭದ್ರತಾ ಪಡೆಯಡಿ ಆಲಮಟ್ಟಿ ಜಲಾಶಯದ ಭದ್ರತೆಗೆ 100ಕ್ಕಿಂತ ಹೆಚ್ಚು ಡಿಎಆರ್ ಪಡೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದರು.
ಇಂದು ಬೆಳಿಗ್ಗೆ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಆಲಮಟ್ಟಿ ಜಲಾಶಯ ವೀಕ್ಷಿಸಿದ ಭಾಸ್ಕರ್ ರಾವ್, ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಡಿಎಆರ್ ಪಡೆಯನ್ನು ಆಲಮಟ್ಟಿ ಜಲಾಶಯ ಭದ್ರತೆಗೆ ನಿಯೋಜಿಸಲಾಗಿದೆ. ಜಲಾಶಯ ವೀಕ್ಷಿಸಲು ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದ್ದು, ಇದಕ್ಕೆ ನಿಯೋಜನೆ ಮಾಡಿರುವ ಡಿಎಆರ್ ತಂಡಕ್ಕೆ ಬೋಟಿಂಗ್, ಸೂಕ್ಷ್ಮ ದುರ್ಬಿನ್ ಒದಗಿಸಲಾಗಿದೆ ಎಂದರು.
ರಾಜ್ಯದ ಪ್ರಮುಖ ಸ್ವತ್ತುಗಳಾಗಿರುವ ವಿದ್ಯುತ್ ಸ್ಥಾವರ, ಜಲಾಶಯಗಳು, ರಿಸರ್ವ್ ಬ್ಯಾಂಕ್ ಹಾಗೂ ರಾಜ್ಯದ 6 ವಿಮಾನ ನಿಲ್ದಾಣದ ಭದ್ರತೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಸರ್ಕಾರ ರಚನೆ ಮಾಡಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 3 ಬೆಟಾಲಿಯನ್ ಕಾರ್ಯನಿರ್ವಹಿಸಲಿದ್ದು, ಭದ್ರತೆಗೆ ಮಾತ್ರ ಸೀಮಿತವಾಗದೆ ಭಯೋತ್ಪಾದಕ ಕೃತ್ಯಗಳನ್ನು ಎದುರಿಸುವಲ್ಲಿ ಹಾಗೂ ಭಯೋತ್ಪಾದಕರು ಅಳವಡಿಸಿಕೊಂಡಿರುವ ಆಧುನಿಕ ತಂತ್ರಜ್ಞಾನ ವನ್ನು ಸಹ ಮೆಟ್ಟಿ ನಿಲ್ಲಲು ಈ ಪಡೆ ಸನ್ನದ್ದವಾಗಿದೆ. ಇದಕ್ಕಾಗಿ ಇವರಿಗೆ ವಿಶೇಷ ತರಬೇತಿ ನೀಡಿ ಸಿದ್ದಪಡಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಆಲಮಟ್ಟಿ ಜಲಾಶಯದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿರುವದು ನಮ್ಮ ಗಮನಕ್ಕೆ ಬಂದಿದೆ. ಇವರಲ್ಲಿ ಕೆಲ ಮೀನುಗಾರರು ಲೈಸನ್ಸ್ ಹೊಂದಿದ್ದರೆ, ಇನ್ನು ಕೆಲವರ ಬಳಿ ಪರವಾನಗಿ ಇಲ್ಲ. ಇಲಾಖೆಯಿಂದ ಮೀನುಗಾರಿಕೆಗೆ ಯಾವುದೇ ಅಡ್ಡಿ ಪಡಿಸುವದಿಲ್ಲ ಆದರೆ ಜಲಾಶಯದ ಭದ್ರತೆಗಾಗಿ ಕೆಲ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಂತಹ ಸ್ಥಳಗಳತ್ತ ಮೀನುಗಾರರು ಬರದಂತೆ ನಿಗಾ ವಹಿಸಲಾಗಿದೆ. ಮೀನುಗಾರರು ಸಹ ನಿರ್ಭಂದಿತ ಪ್ರದೇಶಗಳತ್ತ ಬರದಂತೆ ಎಚ್ಚರ ವಹಿಸಬೇಕೆಂದರು.