ವಿಜಯಪುರ: ಬರದನಾಡು ವಿಜಯಪುರ ಜಿಲ್ಲೆಯಲ್ಲಿ ಅನ್ನದಾತ ಒಂದೇ ಬೆಳೆ ನಂಬಿ ಕುಳಿತುಕೊಳ್ಳದೇ ಆದಾಯ ತರುವ ಕೃಷಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾನೆ. ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ತರುತ್ತಿರುವ ಬೆಳೆಗಳಿಗೆ ಮಾರು ಹೋಗಿದ್ದಾನೆ. ಜಿಲ್ಲೆಯಲ್ಲಿ ಈಗ ರೇಷ್ಮೆ ಬೆಳೆಗೆ ರೈತ ಹೆಚ್ಚು ಆಸಕ್ತಿ ತೋರುತ್ತಿದ್ದಾನೆ. ಜಿಲ್ಲೆಯ ರೈತ ಕುಟುಂಬವೊಂದು ವಿವಿಧ ಬೆಳೆಗಳ ಜೊತೆ ರೇಷ್ಮೆ ಬೆಳೆದು ಅದರಲ್ಲಿ ಯಶಸ್ವಿಗೊಂಡಿದ್ದಾರೆ.
ಜಿಲ್ಲೆಯ ಹಡಗಲಿ ಗ್ರಾಮದ ಸೀಳಿನ ಕುಟುಂಬದ ರೈತ ಯಶೋಗಾಥೆ ಇದು. ಇವರ ಬಳಿ ಇರುವ 22 ಎಕರೆ ಜಮೀನಿನಲ್ಲಿ ರೇಷ್ಮೆ, ಪೇರಲ, ದಾಳಿಂಬೆ ಸೇರಿದಂತೆ ವಿವಿಧ ಬೆಳೆ ಬೆಳೆದು ಲಾಭದ ರುಚಿ ನೋಡುತ್ತಿದ್ದಾರೆ. ರೇಷ್ಮೆ ಇಲಾಖೆಯ ಸಬ್ಸಿಡಿ ಸಹಾಯದಿಂದ 2 ಎಕರೆ ಪ್ರದೇಶದಲ್ಲಿ ರೇಷ್ಮೆ ಮೇವು ಬೆಳೆದು, ವರ್ಷಕ್ಕೆ 4-5 ಬಾರಿ ಬೆಳೆ ತೆಗೆದು ಪ್ರತಿ ಸಲ ಲಕ್ಷಾಂತರ ರೂ. ಲಾಭಗಳಿಸುತ್ತಿದ್ದಾರೆ. ರೇಷ್ಮೆ ಇಲಾಖೆಯಿಂದ 3 ಲಕ್ಷ ರೂ. ಸಬ್ಸಿಡಿ ಪಡೆದು ರೇಷ್ಮೆ ಶೆಡ್ ತಯಾರಿಸಿ, ರೇಷ್ಮೆ ಹುಳುಗಳ ಮೇವು ತಯಾರಿಸಲು ಎರಡು ಎಕರೆ ಭೂಮಿ ಮೀಸಲಿಟ್ಟಿದ್ದಾರೆ. ಇಲಾಖೆಯ ಮಾರ್ಗದರ್ಶನದಿಂದ ಬಿಸಿಲು ಪ್ರದೇಶದಲ್ಲಿಯೂ ಯಶಸ್ವಿ ರೇಷ್ಮೆ ಬೆಳೆಯಬಹುದು ಎಂದು ಸೀಳಿನ ಕುಟುಂಬ ತೋರಿಸಿಕೊಟ್ಟಿದೆ.
ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಎಲೆ ಬೆಳೆದಿರುವ ರೈತ ಚಿಕ್ಕೋಡಿ, ಬಸವನಬಾಗೇವಾಡಿ ಸೇರಿದಂತೆ ವಿವಿಧ ನಗರಗಳಿಂದ ರೇಷ್ಮೆ ಹುಳ ತಂದು ಅವುಗಳನ್ನು ಶೆಡ್ನಲ್ಲಿ ಶೇಖರಿಸಿ ರೇಷ್ಮೆ ಎಲೆ ಹಾಕಿ ಅವುಗಳನ್ನು ಬೆಳೆಸುತ್ತಿದ್ದಾರೆ. ಸುಮಾರು 300 ರೇಷ್ಮೆ ಹುಳ ಖರೀದಿಸಿ ತಂದು ಅವುಗಳನ್ನು ಬೆಳೆಸುತ್ತಿದ್ದಾರೆ. ಇದಕ್ಕೆ ಯಾವ ಕೂಲಿ ಕೆಲಸಗಾರರ ಅವಶ್ಯಕತೆ ಸಹ ಇಲ್ಲ. ನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಹುಳಗಳಿಗೆ ಎಲೆ ಹಾಕಿದರೆ ಸಾಕು, ರೇಷ್ಮೆ ಗೂಡು ತಯಾರಾಗುತ್ತದೆ. ಒಂದು ಬೆಳೆ ಬರಲು 30 ಸಾವಿರ ರೂ. ಖರ್ಚಾಗುತ್ತದೆ. ರೇಷ್ಮೆ ಬೆಳೆ ಮಾರಾಟವಾದಾಗ 1.50 ಲಕ್ಷ ರೂ. ಲಾಭ ಬರಬಹುದು. ಹೀಗೆ ವರ್ಷಕ್ಕೆ 4-5 ಬಾರಿ ರೇಷ್ಮೆ ಬೆಳೆ ತೆಗೆದರೆ ಪ್ರತಿ ವರ್ಷ 5-6 ಲಕ್ಷ ಲಾಭ ಪಡೆಯಬಹುದು ಎನ್ನುತ್ತಾರೆ ರೇಷ್ಮೆ ಬೆಳೆದ ರೈತ.
ಓದಿ : ಪವರ್ ಸ್ಟಾರ್ಗೆ ಹುಟ್ಟುಹಬ್ಬದ ಸಂಭ್ರಮ...ಮೆಚ್ಚಿನ ಅಪ್ಪುಗೆ ಅಭಿಮಾನಿಗಳ ಶುಭ ಹಾರೈಕೆ
ಜಿಲ್ಲೆಯಲ್ಲಿ ಇತ್ತೀಚೆಗೆ ರೇಷ್ಮೆ ಬೆಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೇ ರೇಷ್ಮೆ ಬೆಳೆದರೂ ಅದನ್ನು ರಾಮನಗರ ಜಿಲ್ಲೆಗೆ ತೆರಳಿ ಮಾರಾಟ ಮಾಡಬೇಕಾಗಿದೆ. ಇದರ ಬದಲು ರೇಷ್ಮೆ ಮಾರುಕಟ್ಟೆ ಜಿಲ್ಲೆಯಲ್ಲಿ ಆರಂಭಿಸಿದರೆ, ಹೆಚ್ಚು ಲಾಭದ ಜತೆ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ರೈತರು.