ವಿಜಯಪುರ: ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ದುರ್ಷ್ಕಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪರಸಪ್ಪ ಗುಂಡಕರಜಗಿ(55)ಕೊಲೆಯಾದ ವ್ಯಕ್ತಿ. ಬಸವನಬಾಗೇಬಾಡಿ ತಾಲೂಕಿನ ಕಾಮನಕೇರಿ ನಿವಾಸಿಯಾಗಿದ್ದ ಪರಸಪ್ಪ ಕಳೆದ ಎರಡು ತಿಂಗಳಿಂದ ಅರಕೇರಿ ಗುಡ್ಡದ ಅಮೋಘ ಸಿದ್ದ ಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ರಾತ್ರಿ ದುಷ್ಕರ್ಮಿಗಳು ಪರಸಪ್ಪ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕ್ಯಾಮರಾ ಸ್ವಿಚ್ಡ್ ಆಫ್: ಅಮೋಘಸಿದ್ದ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲಿ ಅಮಾವಾಸ್ಯೆ, ಹುಣ್ಣುಮೆ ಹಾಗೂ ಜಾತ್ರೆ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಭಕ್ತರ ಸುರಕ್ಷತೆಗಾಗಿ ಅರಕೇರಿ ಗುಡ್ಡ ಹಾಗೂ ದೇವಸ್ಥಾನದ ಸುತ್ತಮುತ್ತ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಆದರೆ, ಕಳೆದ ರಾತ್ರಿ ಎಲ್ಲ ಸಿಸಿ ಟಿವಿಗಳನ್ನು ದುಷ್ಕರ್ಮಿಗಳು ಆಫ್ ಮಾಡಿದ್ದರು. ಪೂರ್ವ ನಿಯೋಜಿತವಾಗಿ ನರಸಪ್ಪನನ್ನು ಕೊಲೆ ಮಾಡುವ ಉದ್ದೇಶಕ್ಕಾಗಿ ದೇವಸ್ಥಾನದ ಸುತ್ತಲಿರುವ ಸಿಸಿಟಿವಿಗಳನ್ನ ಬಂದ್ ಮಾಡಿ ನಂತರ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಪರಸಪ್ಪರನ್ನು ಕೆಳೆಗೆ ಕರೆದೊಯ್ದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆಯಾದ ನರಸಪ್ಪ ಕುಡಿಯುವ ಚಟ ಹೊಂದಿದ್ದನು. ಮೂಲತ ಬಸವನಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದ ನಿವಾಸಿಯಾಗಿದ್ದರು. ಮನೆಯಲ್ಲಿ ಜಗಳ ಮಾಡಿಕೊಂಡಾಗೊಮ್ಮೆ ದೇವರ ಸೇವೆ ಮಾಡುತ್ತೇನೆ ಎಂದು ಅರಕೇರಿ ಗ್ರಾಮಕ್ಕೆ ಆಗಮಿಸಿ ಅಮೋಘಸಿದ್ದ ದೇವಸ್ಥಾನದಲ್ಲಿ ಚಿಕ್ಕಪುಟ್ಟ ದೇವಸ್ಥಾನದ ಕೆಲಸಗಳನ್ನು ಮಾಡುತ್ತಾ ಅಲ್ಲಿಯೇ ಆವರಣದಲ್ಲಿ ಮಲಗುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಕೊಲೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಿಸಿಟಿವಿಗಳನ್ನು ಬಂದ್ ಮಾಡಿರುವುದು ತಿಳಿದು ಬಂದಿದೆ. ತನಿಖೆ ಆರಂಭಿಸರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಈಜು ಕೊಳಕ್ಕೆ ಬಿದ್ದು ಕಂದಾಯ ಇಲಾಖೆ ನೌಕರ ಸಾವು: ಮತ್ತೊಂದು ಕಡೆ ಕೊಪ್ಪಳ ತಾಲೂಕು ಬಸಾಪುರ ಗ್ರಾಮದ ಬಳಿಯ ರೆಸಾರ್ಟ್ನ ಈಜುಕೊಳದಲ್ಲಿ ಈಜಲು ತೆರಳಿ ಕಂದಾಯ ಇಲಾಖೆ ನೌಕರ ಸಾವಿಗೀಡಾಗಿರುವ ಘಟನೆ ನಡೆದಿದೆ. ಎಸ್ಡಿಎ ತಾಯಪ್ಪ (26) ಎಂಬುವವರು ಮೃತ ನೌಕರನಾಗಿದ್ದಾರೆ. ಕಂದಾಯ ಇಲಾಖೆ ನೌಕರರು ಗೆಟ್ ಟುಗೆದರ್ ಪಾರ್ಟಿಗೆ ಹೋಗಿದ್ದಾಗ ಈ ಘಟನೆ ಜರುಗಿದೆ. ಕೊಪ್ಪಳ ತಹಸೀಲ್ದಾರ್ ಕಚೇರಿಯಿಂದ ಪೇದರ್ಸ್ ರೇಸಾರ್ಟ್ನಲ್ಲಿ ವಾರ್ಷಿಕ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಊಟ ಮುಗಿಸಿ ತಾಯಪ್ಪ ಈಜಾಡಲು ಹೋಗಿದ್ದಾಗ ಈ ದುರಂತ ನಡೆದಿದೆ. ಕಳೆದ ನಾಲ್ಕೈದು ವರ್ಷಗಳಿಂದ ತಹಸೀಲ್ದಾರ್ ಕಚೇರಿಯಲ್ಲಿ ತಾಯಪ್ಪ ಕೆಲಸ ಮಾಡುತ್ತಿದ್ದರು. ಪತಿ ಸಾವಿನ ಕುರಿತು ಆತನ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆ ಮುನಿರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಬಸ್ ಹರಿದು ಮಹಿಳೆ ಸಾವು: ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುವಾಗ ಅಪಘಾತ ಸಂಭವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಯಶ್ವವಂತಪುರದ ಚಿತ್ರಮಂದಿರವೊಂದರ ಮುಂದೆ ನಡೆದಿದೆ. ವಿನುತಾ (32) ಎಂಬುವವರು ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆ. ಎಂದಿನಂತೆ ವಿನುತಾ ಇಂದು ತಮ್ಮ ವಾಹನದಲ್ಲಿ ಕೆಲಸಕ್ಕೆ ತೆರಳುವಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಅವರ ವಾಹನಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ ವಿನುತಾ ಕೆಳಗೆ ಬಿದ್ದಿದ್ದಾರೆ, ಈ ವೇಳೆ ಬಸ್ನ ಚಕ್ರ ಅವರ ತಲೆ ಮೇಲೆ ಹರಿದಿದ್ದು ಸ್ಥಳದಲ್ಲೆ ವಿನುತಾ ಅಸುನೀಗಿದ್ದಾರೆ. ಇನ್ನು ಆಂಬ್ಯುಲೆನ್ಸ್ ಮೂಲಕ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮನೆ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ