ವಿಜಯಪುರ : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎನ್ನುವ ಮಾತಿದೆ. ಆದರೆ, ವಿಚ್ಛೇದನ ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತವೆ ಎನ್ನುವುದು ಈಗಿನ ಸಂಪ್ರದಾಯವಾಗಿದೆ. ಆದರೆ, ಹಲವು ಬಾರಿ ನ್ಯಾಯಾಲಯಗಳೇ ಮುರಿಯುತ್ತಿದ್ದ ದಾಂಪತ್ಯವನ್ನ ಮತ್ತೆ ಒಂದಾಗಿಸಿದ ಉದಾಹರಣೆಗಳೂ ಇವೆ. ವಿಚ್ಛೇದನ ಬಯಸಿ ಬರುವ ದಂಪತಿಗೆ ಬುದ್ದಿವಾದ ಹೇಳಿ ಮರುಮದುವೆ ಮಾಡಿಸುವ ಕಾರ್ಯವೂ ಕೋರ್ಟ್‌ನಿಂದ ಆಗುತ್ತಿವೆ.
ಅದೇ ರೀತಿ ನಗರದಲ್ಲಿ ನಡೆದ ಮೆಗಾ ಅದಾಲತ್‌ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕೆ. ಭಾಗ್ಯ ಅಚರು ಎರಡು ಜೋಡಿಗೆ ಮರು ಮದುವೆ ಮಾಡಿಸುವ ಮೂಲಕ ಒಡೆದು ಹೋಗುತ್ತಿದ್ದ ಸಂಸಾರಕ್ಕೆ ಮರುಜೀವ ನೀಡಿದ್ದಾರೆ.
ಮೆಗಾ ಅದಾಲತ್‌ನಲ್ಲಿ ಜೀವನಾಂಶ ಹಾಗೂ ವಿಚ್ಛೇದನ ಕೋರಿ ಎರಡು ಪ್ರತ್ಯೇಕ ಅರ್ಜಿ ದಾಖಲಾಗಿದ್ದವು. ಈ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶೆ ಕೆ. ಭಾಗ್ಯ ಅವರು, ಎರಡು ದಂಪತಿಗೆ ಒಂದಾಗಿ ಬಾಳ್ವೆ ನಡೆಸಿದರೆ ಆಗುವ ತೃಪ್ತಿ ಬಗ್ಗೆ ಬುದ್ದಿವಾದ ಹೇಳಿದರು.
ಇದಕ್ಕೆ ಒಪ್ಪಿದ ಎರಡು ದಂಪತಿ ತಮ್ಮ ಅರ್ಜಿಗಳನ್ನು ವಾಪಸ್ ಪಡೆದುಕೊಂಡರು. ಮರು ಮದುವೆ ಮಾಡಿಕೊಳ್ಳಲು ಒಪ್ಪಿದ ಎರಡು ಜೋಡಿ ಹೆಸರು ಬಹಿರಂಗ ಪಡಿಸಲು ನ್ಯಾಯಾಧೀಶರು ನಿರಾಕರಿಸಿದರು.
ಈ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡ ದಂಪತಿ ಮೆಗಾ ಅದಾಲತ್‌ನಲ್ಲಿ ನಡೆದ ಸಂಧಾನ ಪ್ರಕ್ರಿಯೆ ತಮಗೆ ಬದುಕಿನ ಪಾಠ ಕಲಿಸಿಕೊಟ್ಟಿದೆ. ಭವಿಷ್ಯದ ದಿನಗಳಲ್ಲಿ ಚಿಕ್ಕಪುಟ್ಟ ಮನಸ್ತಾಪಕ್ಕೆ ನ್ಯಾಯಾಲಯದ ಮೆಟ್ಟಿಲೇರುವುದಿಲ್ಲ. ನ್ಯಾಯಾಧೀಶರು ದಂಪತಿ ಒಂದಾಗಿ ಇರುವ ಪಾಠ ಹೇಳಿಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ನಂತರ ಖುದ್ದು ನ್ಯಾಯಾಧೀಶರು ದಂಪತಿಗೆ ಆರತಿ ಬೆಳಗಿ ಶುಭಕೋರಿದರು. ಆ ಮೇಲೆ ದಂಪತಿ ಪರಸ್ಪರ ಹೂ ಮಾಲೆ ಬದಲಿಸಿಕೊಂಡು ಮರು ಮದುವೆ ಮಾಡಿಕೊಂಡರು.