ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ರಮೇಶ ಕಾಳೆ, ಗಂಗಾರಾಮ್ ಚೌವ್ಹಾಣ್, ವಿಜಯಪುರ ಮೂಲದ ಪರಶುರಾಮ ಕಾಳೆ, ಕಿರಣ ಬೇಡೆಕರ, ದೇವದಾಸ ಚವ್ಹಾಣ, ತನ್ವೀರ್ ಹೊನ್ನುಟಗಿ, ದಶರಥ ಹೊಸಮನಿ ಬಂಧಿತರು.
ಇವರಿಂದ ಒಟ್ಟು 21 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ 356 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಒಂದು ಮೊಬೈಲ್, ಒಂದು ಬೊಲೆರೋ ವಾಹನ ವಶಕ್ಕೆ ಪಡೆಯಲಾಗಿದೆ.
ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಎಟಿಎಂ ಕಳ್ಳತನ ಹಾಗೂ ಬಂಗಾರದ ಅಂಗಡಿ ಸೇರಿದಂತೆ ಒಟ್ಟು 11 ಕಡೆ ಕಳ್ಳತನ ಮಾಡಿದ ಆರೋಪ ಬಂಧಿತರ ಮೇಲಿದೆ. ವಿಜಯಪುರ ಜಿಲ್ಲೆಯಲ್ಲಿ ಎಂಟು ಕಡೆಗಳಲ್ಲಿ ಕಳ್ಳತನ ಮಾಡಿದ್ದು, ಬಾಗಲಕೋಟೆ ನಗರದಲ್ಲಿ ಒಂದು, ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು, ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಡೆ ಕಳ್ಳತನ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.