ಕಾರವಾರ (ಉತ್ತರ ಕನ್ನಡ): ಅಪಘಾತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು, ಗಂಭೀರ ಗಾಯಗೊಂಡಿದ್ದ ಯುವತಿಯೋರ್ವಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದ ಮಾಜಿ ಶಾಸಕ ಸತೀಶ್ ಸೈಲ್ಗೆ, ಇಂದು ಗುಣಮುಖವಾಗಿ ಬಂದ ಯುವತಿ ಕೃತಜ್ಞತೆ ಸಲ್ಲಿಸಿದ್ದಾಳೆ.
![Young woman thanked to former Mla Satish Sail](https://etvbharatimages.akamaized.net/etvbharat/prod-images/kn-kwr-04-krtajnate-7202800_22072020210341_2207f_1595432021_244.jpg)
ಕಳೆದ ಜನವರಿ ತಿಂಗಳಿನಲ್ಲಿ ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಕುಮಟಾದಿಂದ ಗೋವಾ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವತಿಯ ತಂದೆ-ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದರು. ಯುವತಿಯ ಸಹೋದರಿಗೂ ಗಾಯಗಳಾಗಿತ್ತು. ಇನ್ನು, ಅಪಘಾತದ ಸುದ್ದಿ ತಿಳಿದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಮಾಜಿ ಶಾಸಕ ಸತೀಶ್ ಸೈಲ್ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಕಡೆ ಯಾರೂ ಇಲ್ಲದನ್ನು ಗಮನಿಸಿ, ತಾವೇ ಖುದ್ದಾಗಿ ಆ್ಯಂಬ್ಯುಲೆನ್ಸ್ ಮೂಲಕ ಯುವತಿಯನ್ನು ಕರೆದುಕೊಂಡು ಹೋಗಿ ಗೋವಾ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲದೇ, ಆಕೆಯ ಕುಟುಂಬಸ್ಥರನ್ನು ಪತ್ತೆಹಚ್ಚಿ ವಿಷಯ ತಿಳಿಸಿದ್ದರು. ಇನ್ನು, ಗಾಯಗೊಂಡಿದ್ದ ಯುವತಿ ವೈಷ್ಣವಿ ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಇಂದು ಸತೀಶ್ ಸೈಲ್ ಮನೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದ್ದಾಳೆ. ತನ್ನ ಜೀವ ಉಳಿಸಿದ್ದಕ್ಕೆ ಧನ್ಯವಾದ ಸಲ್ಲಿಸಿ ಸೈಲ್ ಅವರಿಂದ ಆಶೀರ್ವಾದ ಪಡೆದಳು.