ಶಿರಸಿ : ಯಕ್ಷಗಾನ ಕ್ಷೇತ್ರದ ಖ್ಯಾತ ಮತ್ತು ಹಿರಿಯ ಭಾಗವತರಾಗಿದ್ದ ಉತ್ತರ ಕನ್ನಡದ ನೆಬ್ಬೂರು ನಾರಾಯಣ ಹೆಗಡೆ (83) ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಇತ್ತೀಚಿನ ದಿನಗಳವರೆಗೂ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಅಲ್ಪ ಪ್ರಮಾಣದಲ್ಲಿ ಭಾಗವತಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದ ಅವರನ್ನು ವಯೋ ಸಹಜ ಕಾಯಿಲೆಯೂ ಕಾಡುತ್ತಲಿತ್ತು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
1956-57ರಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು, ಕೆರೆಮನೆ ಮೇಳವನ್ನು ಸೇರಿದರು. ಅಲ್ಲಿಂದ ಪ್ರಾರಂಭವಾದ ಅವರ ಯಕ್ಷಗಾನ ಪಯಣ 2010ರವರೆಗೂ ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮುಂದುವರಿದಿತ್ತು.
ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ್ದರು. ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳ-ದಮಯಂತಿ, ಹರಿಶ್ಚಂದ್ರ, ರಾಮ ನಿರ್ಯಾಣದಂತಹ ಪ್ರಸಂಗಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ನೆಬ್ಬೂರು ಅವರಿಗೆ ಸಲ್ಲುತ್ತದೆ.
ಇವರ ಭಾಗವತಿಕೆಯ ಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ- ಪುರಸ್ಕಾರಗಳು ಅನೇಕ. ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದ ಅವರು, ಅಭಿಮಾನಿಗಳ ಆಗ್ರಹಕ್ಕೆ ಮಣಿದು ಆಟ-ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದಾಗಿ ಯಕ್ಷಗಾನದ ಉತ್ತರ ಕನ್ನಡ ಪರಂಪರೆಯ ಕೊಂಡಿ ಕಳಚಿದಂತಾಗಿದೆ. ಇವರ ಅಂತ್ಯಕ್ರಿಯೆಯ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.