ಕಾರವಾರ: ಉತ್ತರಕನ್ನಡದಲ್ಲಿ ಕಳೆದೊಂದು ತಿಂಗಳಿನಿಂದ ಕೊರೊನಾ ಪಾಸಿಟಿವ್ ದರ 1ಕ್ಕಿಂತ ಕಡಿಮೆ ಇದೆ. ಶಾಲಾ - ಕಾಲೇಜುಗಳು ಪ್ರಾರಂಭವಾಗಿದ್ದು, ಮಕ್ಕಳು ಸಹ ತರಗತಿಗಳಿಗೆ ತೆರಳುತ್ತಿದ್ದಾರೆ. ಆದರೆ, ಈ ನಡುವೆ ಸಣ್ಣ ಮಕ್ಕಳಲ್ಲಿ ಜ್ವರ, ನೆಗಡಿ ಹೆಚ್ಚಾಗಿ ಕಂಡು ಬರುತ್ತಿರುವುದು ಜನರ ನಿದ್ದೆಗೆಡಿಸಿದೆ.
ಉತ್ತರಕನ್ನಡದಲ್ಲಿ ಸದ್ಯ ಮಳೆಯ ಅಬ್ಬರ ಕಡಿಮೆಯಾಗಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಸಹ ನಿಯಂತ್ರಣಕ್ಕೆ ಬರುತ್ತಿದೆ. ಕೊರೊನಾ ಆತಂಕದಿಂದ ನಿಧಾನವಾಗಿ ಹೊರ ಬರುತ್ತಿರುವ ಜನರು ನೆಮ್ಮದಿಯಿಂದ ತಮ್ಮ ಮಕ್ಕಳನ್ನು ಶಾಲಾ - ಕಾಲೇಜುಗಳಿಗೆ ಕಳುಹಿಸುತ್ತಿದ್ದಾರೆ. ಆದರೆ, ಕಳೆದ ಹದಿನೈದು ದಿನಗಳಿಂದ ಜಿಲ್ಲೆಯ ಬಹುತೇಕ ಮಕ್ಕಳಲ್ಲಿ ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಪಾಲಕರಲ್ಲಿ ಆತಂಕ ಸೃಷ್ಟಿಸಿದ್ದು, ಕೊರೊನಾ ಮೂರನೇ ಅಲೆ ಭೀತಿ ಮನೆಮಾಡಿದೆ.
ಜಿಲ್ಲೆಯಲ್ಲಿ ಸದ್ಯಕ್ಕೆ ನಿತ್ಯ 30 ರಿಂದ 40 ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಮೂರನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಿರುವಾಗಲೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಸುಮಾರು 40 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಇದು ಸಾರ್ವಜನಿಕರನ್ನ ಆತಂಕಕ್ಕೀಡು ಮಾಡಿದೆ.
ಇನ್ನು ಜಿಲ್ಲೆಯಲ್ಲಿ ಕಳೆದ ವರ್ಷ 18 ವರ್ಷದೊಳಗಿನ 37,753 ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆದರೆ, ಈ ಬಾರಿ ಕೇವಲ ಏಳು ತಿಂಗಳ ಅವಧಿಯಲ್ಲಿ 46,856 ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಕಳೆದ ಕೆಲ ದಿನಗಳಿಂದ ಇದು ಹೆಚ್ಚಾಗಿದೆ ಅನ್ನೋದು ವೈದ್ಯರ ಅಭಿಪ್ರಾಯ.
ಮೊದಲನೇ ಅಲೆಯಲ್ಲಿ 1,910 ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಎರಡನೇ ಅಲೆಯಲ್ಲಿ ಇದುವರೆಗೆ 5,935 ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ. ಅಲ್ಲದೇ, ಸದ್ಯಕ್ಕೆ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಮೂರನೇ ಅಲೆ ಆರಂಭವಾಗಿದೆ ಅನ್ನೋ ಆತಂಕ ಎದುರಾಗಿದೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನ ಕೇಳಿದ್ರೆ, ಮಳೆ, ಬಿಸಿಲಿನ ವಾತಾವರಣ ಬದಲಾವಣೆಯಿಂದಾಗಿ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಅಂತಾರೆ.