ಕಾರವಾರ: ಕಾರವಾರಿಗರನ್ನು ಹೀಯಾಳಿಸಿದ ಗೋವಾ ಮೂಲದ ಮಹಿಳೆಯೋರ್ವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಅದೇ ಮಹಿಳೆ ಇನ್ನೊಂದು ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾಳೆ.
ಗೋವಾದ ಕಾಣಕೋಣದ ಶಲಾಖಾ ದೇಸಾಯಿ ಎನ್ನುವ ಮಹಿಳೆ ಇತ್ತೀಚೆಗೆ ಕಾಣಕೋಣದಲ್ಲಿ ತಮ್ಮ ಸ್ನೇಹಿತರ ಜೊತೆ ಚರ್ಚೆ ಮಾಡುವ ವೇಳೆ ಕಾರವಾರ ಯುವಕರು ಗೋವಾ ಹುಡುಗಿಯರನ್ನು ಮದುವೆಯಾಗಲು ಹಪಹಪಿಸುತ್ತಾರೆ. ನಾನು ಕೂಡ ಮನಸ್ಸಿಲ್ಲದೇ ಕಾರವಾರದ ಯುವಕನೋರ್ವನನ್ನು ಮದುವೆಯಾಗಿದ್ದೆ. ಆದರೆ ಕಾರವಾರದಿಂದ ಬಂದವರು ನಾವು ಮಾಡಿದ ಅಡುಗೆಯನ್ನು ಖಾಲಿ ಮಾಡಿ, ಕೈ ತೊಳೆಯದೇ ವೇದಿಕೆ ಮೇಲೆ ಬಂದಿದ್ದರು. ನಂತರ ಬಸ್ಸಿನಲ್ಲಿ ಹಿಂದಿನ ಸೀಟೋಂದರಲ್ಲಿ ತನ್ನನ್ನು ಕೂರಿಸಿಕೊಂಡು ಹುಡುಗನ ಮನೆಗೆ ಕರೆದುಕೊಂಡು ಹೋಗಿ, ರಾತ್ರಿ ಮನೆ ಕೆಲಸ ಮಾಡಲು ಕೊಟ್ಟಿದ್ದರು. ನನಗೆ ಅಲ್ಲಿ ಇರಲಾಗದೇ ವಾಪಸ್ ಬಂದು ಪ್ರಿಯಕರನೊಂದಿಗೆ ಸುಖವಾಗಿದ್ದೇನೆ. ಇನ್ನುಮುಂದೆ ಗೋವಾ ಹುಡುಗಿಯರು ಕಾರವಾರದ ಯುವಕರನ್ನು ಮದುವೆಯಾಗಬೇಕಾದರೆ ವಿಚಾರ ಮಾಡಬೇಕು ಎಂದು ಶಲಾಖಾ ವಿಡಿಯೋದಲ್ಲಿ ಹೇಳಿದ್ದಳು.
ಇದನ್ನೂ ಓದಿ: ಸುಳ್ಳು ಜಾಹೀರಾತು ನಂಬಿ 1.13 ಲಕ್ಷ ರೂ. ಕಳೆದುಕೊಂಡ ಯುವಕ; ನೀವು ಮೋಸ ಹೋಗಿರಿ ಜೋಕೆ!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕೆಲವರು ಈಕೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದರು. ಕಾರವಾರದವರು ಗೋವಾದವರ ಜೊತೆ ಇಂದಿಗೂ ಉತ್ತಮ ಸಂಬಂಧ ಹೊಂದಿದ್ದು, ವ್ಯಾಪಾರ, ಉದ್ಯೋಗ ಹಾಗೂ ಇನ್ನಿತರ ಕಾರಣಕ್ಕಾಗಿ ಪ್ರತಿನಿತ್ಯ ಅಲ್ಲಿಗೆ ಹೋಗಿ ಬರುವರಿದ್ದಾರೆ. ಎರಡು ರಾಜ್ಯದ ಜನರ ಭಾವನೆಗಳ ಬಗ್ಗೆ ದಿಕ್ಕು ತಪ್ಪಿಸುವ ಕೆಲಸವನ್ನು ಶಲಾಖಾ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇಷ್ಟೆಲ್ಲ ಘಟನೆಗಳ ನಡೆದ ಬಳಿಕ ಮತ್ತೊಂದು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಕಾರವಾರಿಗರ ಕ್ಷಮೆ ಕೋರಿದ್ದಾರೆ. ನಾನು ಕಾರವಾರದವರನ್ನು ಹೀಯಾಳಿಸುವ ಉದ್ದೇಶದಿಂದ ವಿಡಿಯೋ ಮಾಡಿರಲಿಲ್ಲ. ಅಲ್ಲದೇ ಇದು ಬಹಳ ಹಳೆಯ ವಿಡಿಯೋ. ಕಥೆ ರೂಪದಲ್ಲಿ ತಿಳಿಸುವಾಗ ಅದನ್ನು ವಿಡಿಯೋ ಮಾಡಿ ಜನರಲ್ಲಿ ತಪ್ಪು ಸಂದೇಶ ತಲುಪಿಸುವ ಕಾರ್ಯವನ್ನು ಕೆಲವರು ಮಾಡಿದ್ದಾರೆ. ನನ್ನ ಹೇಳಿಕೆಯಿಂದ ಕಾರವಾರಿಗರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿಕೊಂಡಿದ್ದಾಳೆ.