ಕಾರವಾರ: ಉತ್ತರಕನ್ನಡ ಜಿಲ್ಲೆಯ 11 ತಾಲೂಕುಗಳ ವ್ಯಾಪ್ತಿಯಲ್ಲಿ ಮೇ. 1ರಿಂದ 12ರವರೆಗೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟು 17 ಗ್ರಾಮ ಪಂಚಾಯತಿಗಳ ಪ್ರದೇಶಗಳನ್ನು ವಿಶೇಷ ಕಂಟೈನ್ಮೆಂಟ್ ವಲಯಗಳೆಂದು ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ ಆದೇಶ ಹೊರಡಿಸಿದ್ದಾರೆ.
ವಿಶೇಷ ಕಂಟೈನ್ಮೆಂಟ್ ವಲಯಗಳ ವ್ಯಾಪ್ತಿಗೆ ಒಳಪಡುವ ತಾಲೂಕಾವಾರು ಗ್ರಾಮ ಪಂಚಾಯತಿಗಳ ಪೈಕಿ ಕಾರವಾರ ತಾಲೂಕಿನ ಚಿತ್ತಾಕುಲಾ, ಮಲ್ಲಾಪುರ, ಅಂಕೋಲಾದ ಬೊಬ್ರುವಾಡ, ಹೊನ್ನಾವರದ ಕರ್ಕಿ, ಭಟ್ಕಳದ ಶಿರಾಲಿ, ಶಿರಸಿಯ ಬನವಾಸಿ, ಸಿದ್ದಾಪುರದ ಅನಲೆಬೈಲು, ಮನ್ಮನೆ, ಕೋಲಶಿರ್ಸಿ, ಯಲ್ಲಾಪುರದ ಮಾವಿನಮನೆ, ಉಮಚಗಿ, ಮುಂಡಗೋಡದ ಇಂದೂರು, ಜೋಯಿಡಾದ ರಾಮನಗರ, ಅಖೇತಿ, ದಾಂಡೇಲಿಯ ಅಂಬಿಕಾನಗರ, ಅಂಬೇವಾಡಿ, ಹಳಿಯಾಳದ ಮುರ್ಕವಾಡ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದುವೆಗೆ ಈಗಾಗಲೇ ಅನುಮತಿ ಪಡೆದವರಿಗೆ ಮಾತ್ರ ಅವಕಾಶಗಳಿದ್ದು, 40ರ ಬದಲು ಗರಿಷ್ಟ 20 ಜನರನ್ನು ಮಾತ್ರ ಸೇರಲು ಅವಕಾಶವಿರುತ್ತದೆ. ಅಲ್ಲದೆ ಇಂದಿನಿಂದ ಹೊಸ ಮದುವೆ ಸಮಾರಂಭಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್ಗಳು; 5 ಮಂದಿ ನಾಪತ್ತೆ
ಈ ಪ್ರದೇಶದಲ್ಲಿ ಯಾವುದೇ ದ್ವಿಚಕ್ರ, ನಾಲ್ಕು ಚಕ್ರದ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಕೇವಲ ವೈದ್ಯಕೀಯ ಕಾರಣಕ್ಕಾಗಿ ಮಾತ್ರ ಸಂಚರಿಸಲು ಅನುಮತಿಸಲಾಗಿದೆ. ಕಾಲ್ನಡಿಗೆಯಲ್ಲಿಯೂ ವಿನಾಕಾರಣ ಮನೆಯಿಂದ ಹೊರಗಡೆ ಬರುವುದನ್ನು ನಿಷೇ ಧಿಸಲಾಗಿದೆ. ತರಕಾರಿ, ದಿನಸಿ, ಮೀನು, ಮಾಂಸ ಮಾರಾಟದ ವ್ಯಾಪಾರ ನಿರ್ಬಂಧಿಸಲಾಗಿದೆ. ತಳ್ಳುವ ಗಾಡಿಯ ಮೂಲಕ ಮಾತ್ರ ವ್ಯಾಪಾರಕ್ಕೆ ಅನುಮತಿಸಲಾಗಿದೆ.
ಯಾವುದೇ ಸಮಾರಂಭಗಳಿಗೆ ಮತ್ತು ಸಂಚಾರಕ್ಕಾಗಿ ಪಾಸ್ಗಳನ್ನು ಪಡೆಯಲು ಅವಕಾಶ ಇರುವುದಿಲ್ಲ. ಸರ್ಕಾರಿ ಕಚೇರಿಯ ಅಧಿಕಾರಿ/ ಸಿಬ್ಬಂದಿ, ಬ್ಯಾಂಕ್, ಭಾರತೀಯ ಜೀವ ವಿಮಾ ಕಾರ್ಯಾಲಯದ ಅಧಿಕಾರಿ/ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸಂಚರಿಸತಕ್ಕದ್ದು. ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ಧರಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ.