ಕಾರವಾರ: ಉತ್ತರಕನ್ನಡ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪಟ್ಟಿಯನ್ನು ಸರ್ಕಾರ ಪ್ರಕಟಿಸಿ ರಾಜ್ಯಪತ್ರ ಹೊರಡಿಸಿದ್ದು, ಕೊನೆಗೂ ಆಯ್ಕೆಯಾದ ಎರಡು ವರ್ಷದ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೇರುವ ಅವಕಾಶ ಲಭ್ಯವಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದಾಗಿ ಸದಸ್ಯರ ಆಯ್ಕೆಯಾಗಿ 2 ವರ್ಷ ಕಳೆಯುತ್ತಿದ್ದರೂ ಇದುವರೆಗೆ ಆಡಳಿತ ಮಂಡಳಿ ರಚನೆಯೇ ಆಗಿರಲಿಲ್ಲ. 2018ರ ಸೆ. 3 ಮತ್ತು 6ರಂದು ಸರ್ಕಾರ ಮೀಸಲಾತಿ ಪ್ರಕಟ ಮಾಡಿತ್ತು. ಆ ಬಳಿಕವೂ ಗೊಂದಲ ಬಗೆಹರಿದಿರಲಿಲ್ಲ.
ಇದೇ ವರ್ಷದ ಮಾರ್ಚ್ 11ರಂದು ನಗರಾಭಿವೃದ್ಧಿ ಇಲಾಖೆ ಪರಿಷ್ಕೃತ ಮೀಸಲಾತಿ ಪ್ರಕಟಿಸಿದ್ದರೂ ಸಹ ಮೀಸಲಾತಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರು ಇರಲಿಲ್ಲ. ಇನ್ನು, ಜಿಲ್ಲೆಯ ಮೂರು ನಗರಸಭೆ, ನಾಲ್ಕು ಪುರಸಭೆ ಹಾಗೂ ಐದು ಪಟ್ಟಣ ಪಂಚಾಯತಿಗಳಿಗೆ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಹೀಗಿದೆ.
- ನಗರಸಭೆಗಳು:
ಕಾರವಾರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದ ‘ಅ’ ವರ್ಗ
ಶಿರಸಿ: ಅಧ್ಯಕ್ಷ-ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ
ದಾಂಡೇಲಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ‘ಬ’ ವರ್ಗ
- ಪುರಸಭೆಗಳು:
ಭಟ್ಕಳ: ಅಧ್ಯಕ್ಷ, ಉಪಾಧ್ಯಕ್ಷ-ಸಾಮಾನ್ಯ
ಕುಮಟಾ: ಅಧ್ಯಕ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ
ಹಳಿಯಾಳ: ಅಧ್ಯಕ್ಷ-ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ
ಅಂಕೋಲಾ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದ ‘ಅ’ ವರ್ಗದ ಮಹಿಳೆ
- ಪಟ್ಟಣ ಪಂಚಾಯತಿಗಳು:
ಸಿದ್ದಾಪುರ: ಅಧ್ಯಕ್ಷ-ಹಿಂದುಳಿದ ‘ಅ’ ವರ್ಗದ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
ಯಲ್ಲಾಪುರ: ಅಧ್ಯಕ್ಷ, ಉಪಾಧ್ಯಕ್ಷ-ಸಾಮಾನ್ಯ
ಮುಂಡಗೋಡ: ಅಧ್ಯಕ್ಷ-ಪರಿಶಿಷ್ಟ ಜಾತಿಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ
ಹೊನ್ನಾವರ: ಅಧ್ಯಕ್ಷ-ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ
ಜಾಲಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ‘ಅ’ ವರ್ಗದ ಮಹಿಳೆ