ಕಾರವಾರ(ಉತ್ತರ ಕನ್ನಡ) : ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಹೀಗೆ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಹೊನ್ನಾವರದ ಅಪ್ಸರಕೊಂಡದಲ್ಲಿ ಮಣ್ಣು ಕುಸಿಯುತ್ತಿರುವ ಕಾರಣ ಗುಡ್ಡದ ಕೆಳಗಿನ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರೆ, ಇನ್ನೊಂದೆಡೆ ಅಣಶಿ ಘಟ್ಟದಲ್ಲಿ ಮಣ್ಣು ಕುಸಿಯುತ್ತಿರುವ ಹಿನ್ನೆಲೆ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಜಿಲ್ಲೆಯ ಜೋಯಿಡಾ ತಾಲೂಕಿನ ಅಣಶಿ ಘಟ್ಟದ ರಾಜ್ಯ ಹೆದ್ದಾರಿ 34 ರಲ್ಲಿ ಗುಡ್ಡ ಕುಸಿತದಿದ್ದು ಬೆಳಗಾವಿ - ಕಾರವಾರ ಬಂದ್ ಆಗಿದೆ. ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಅಪ್ಸರಕೊಂಡ ಗ್ರಾಮದಲ್ಲಿ ಗುಡ್ಡ ಕುಸಿಯುತ್ತಿದ್ದು, ದೊಡ್ಡ ದೊಡ್ಡ ಕಲ್ಲುಬಂಡೆಗಳು ಸುಮಾರು 750 ಮೀಟರ್ ಉದ್ದಕ್ಕೆ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಗಣಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಬಳಿಕ ಜನರಿಗೆ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ : ಅಣಶಿ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ: ರಾಜ್ಯ ಹೆದ್ದಾರಿ ಸಂಚಾರ ಬಂದ್
ಅಪ್ಸರಕೊಂಡದಲ್ಲಿ 150ಕ್ಕೂ ಅಧಿಕ ಮನೆಗಳಿದ್ದು 1,700ಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕರು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದು, ತಮ್ಮ ಜಾನುವಾರುಗಳನ್ನು ಬಿಟ್ಟು ಸ್ಥಳಾಂತರಗೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ. ಗುಡ್ಡ ಪ್ರದೇಶದಲ್ಲಿ ಪ್ರತಿಬಾರಿ ಮಳೆಯ ನೀರು ಹರಿದು ಬರುತ್ತದೆ. ಗ್ರಾಮದಲ್ಲಿ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಮಳೆಯ ನೀರು ಹೋಗಲು ವ್ಯವಸ್ಥೆ ಮಾಡುವ ಜೊತೆಗೆ ಕುಸಿಯುತ್ತಿರುವ ಭಾಗದಲ್ಲಿ ಗುಡ್ಡವನ್ನು ಸಮತಟ್ಟು ಮಾಡಿ ಶಾಶ್ವತ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೊನ್ನಾವರದ ಅಪ್ಸರಕೊಂಡದಲ್ಲಿ ಗುಡ್ಡ ಕುಸಿತದ ಭೀತಿ: ಕಾಳಜಿಕೇಂದ್ರಕ್ಕೆ ಜನರ ಸ್ಥಳಾಂತರ