ಕಾರವಾರ(ಉತ್ತರ ಕನ್ನಡ): ಕರಾವಳಿ ಭಾಗದಲ್ಲಿ ಕಟ್ಟಡ, ಮನೆಗಳ ನಿರ್ಮಾಣಕ್ಕೆ ಕೆಂಪು ಕಲ್ಲು ಅನಿವಾರ್ಯವಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಅನಿವಾರ್ಯತೆ ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇನ್ನು ಅಧಿಕಾರಿಗಳು ಮಾತ್ರ ತಮಗೆ ಬೇಕಾದವರಿಗೆ ಸುಮ್ಮನೇ ಬಿಟ್ಟು ಕೆಲವರಿಗೆ ಮಾತ್ರ ಗುರಿ ಮಾಡಿ ಶಿಕ್ಷೆ ಕೊಡಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆಂಪು ಕಲ್ಲು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಮುಖವಾದದ್ದು. ಇಟ್ಟಿಗೆಗಳನ್ನ ಬಳಸಿ ಕಟ್ಟಡ ನಿರ್ಮಾಣ ಮಾಡದ ಹಿನ್ನೆಲೆ ಭೂಮಿಯಲ್ಲಿ ಸಿಗುವ ಕಲ್ಲನ್ನ ತೆಗೆದು ಮಾರಾಟ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ದಂಧೆ ಇದೀಗ ಮಾಫಿಯಾ ಆಗಿದೆ ಎನ್ನಲಾಗ್ತಿದೆ.
ಕೆಂಪು ಕಲ್ಲು ತೆಗೆಯದಂತೆ ಆದೇಶ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಇಂಡಿಯನ್ ಬ್ಯೂರೋ ಆಫ್ ಮೈನ್ಸ್, ಅಲ್ಯೂಮಿನಿಯಂ ಕಂಟೆಂಟ್ ಶೇ.20ಕ್ಕಿಂತ ಹೆಚ್ಚಿದ್ದ ಪ್ರದೇಶದಲ್ಲಿ ಕೆಂಪು ಕಲ್ಲು ತೆಗೆಯದಂತೆ ಆದೇಶ ಮಾಡಿತ್ತು. ಮಾಲ್ಕಿ ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಭೂಮಿ ಸಮತಟ್ಟು ಮಾಡಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡದೆ ಕೆಂಪು ಕಲ್ಲು ತೆಗೆಯಬೇಕು ಎಂದು ಆದೇಶಿಸಿತ್ತು. ಆದರೆ ಜಿಲ್ಲೆಯಲ್ಲಿ ಬಹುತೇಕ ಎಲ್ಲ ತಾಲೂಕುಗಳಲ್ಲಿ ಯಾರೊಬ್ಬರು ಪರವಾನಗಿ ಪಡೆಯದೇ ಕೆಂಪು ಕಲ್ಲನ್ನ ತೆಗೆಯುತ್ತಿದ್ದಾರೆ.
ಇನ್ನು ಅಧಿಕಾರಿಗಳು ಮಾತ್ರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಕೆಲವರನ್ನ ಮಾತ್ರ ಗುರುತುಪಡಿಸಿ ತೊಂದರೆ ಕೊಡುತ್ತಿದ್ದಾರಂತೆ. ಎಲ್ಲರಿಗೂ ಅಧಿಕೃತವಾಗಿ ಪರವಾನಗಿ ನೀಡಿ ಕೆಂಪು ಕಲ್ಲು ತೆಗೆಯಲು ಅವಕಾಶ ಕೊಡಿ. ಇಲ್ಲದಿದ್ದರೆ ಎಲ್ಲವನ್ನೂ ಬಂದ್ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿದೆ.
ಎಲ್ಲ ತಾಲೂಕಿನಲ್ಲಿಯೂ ಕೆಂಪು ಕಲ್ಲು ತೆಗೆಯುತ್ತಿದ್ದು, ಇದು ಜನರಿಗೆ ಅನಿವಾರ್ಯ ಎಂದು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ ಎಗ್ಗಿಲ್ಲದೆ ಈ ಚಟುವಟಿಕೆ ನಡೆಯುತ್ತಿದೆ. ತಾಲೂಕು ಆಡಳಿತ ಮಾತ್ರ ಅರಣ್ಯ ಭೂಮಿಯಲ್ಲಿ ಕೆಂಪು ಕಲ್ಲು ತೆಗೆದು ಅಂತವರ ಮೇಲೆ ಕ್ರಮ ಕೈಗೊಳ್ಳದೇ ಕೆಲವರನ್ನ ಮಾತ್ರ ಗುರಿಯಾಗಿಸಿ ತೊಂದರೆ ಕೊಟ್ಟು ದಂಡ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಅಕ್ರಮವಾಗಿ ಯಾರೇ ಮಾಡಿದರು ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಕಡೆ ಅಕ್ರಮವಾಗಿಯೇ ಕೆಂಪು ಕಲ್ಲು ತೆಗೆಯುತ್ತಿದ್ದು ಅಧಿಕಾರಿಗಳಿಗೆ ಇದು ಹಣ ಮಾಡಿಕೊಳ್ಳುವ ದಂಧೆಯಾಗಿದೆ ಎನ್ನುವ ಆರೋಪ ಕೆಲ ಸಾರ್ವಜನಿಕರದ್ದು, ಹಣ ಕೊಟ್ಟವರಿಗೆ, ರಾಜಕೀಯ ಒತ್ತಡ ಇದ್ದವರಿಗೆ ಮಾತ್ರ ಬಿಟ್ಟು ಜನಸಾಮಾನ್ಯರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅನಧಿಕೃತ ಕೆಂಪು ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಕೆಂಪು ಕಲ್ಲು ಅನಿವಾರ್ಯವಾಗಿರುವುದರಿಂದ ಜಿಲ್ಲೆಯಲ್ಲಿ ಅಕ್ರಮದ ಬದಲು ಸಕ್ರಮವಾಗಿ ತೆಗೆಯಲು ಅವಕಾಶ ಮಾಡಿಕೊಡಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಕೆಂಪು ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳಿಂದ ದಾಳಿ: ಯಂತ್ರೋಪಕರಣಗಳು ವಶ