ಕಾರವಾರ: ಉತ್ತರಕನ್ನಡದ ಜೀವನದಿ ಕಾಳಿಯಿಂದ ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆ ಭಾಗದವರಿಗೆ ಇದು ಸಂತಸದ ವಿಷಯವಾದರೂ ಈ ಯೋಜನೆ ಉತ್ತರಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ಕಾಳಿ, ಜಿಲ್ಲೆಯ ಜೀವನದಿ. 184 ಕಿ.ಮೀ. ಉದ್ದದ ಈ ನದಿಯ ಹರಿವಿನುದ್ದಕ್ಕೂ ಸೂಪಾ, ಕೊಡಸಳ್ಳಿ, ಕದ್ರಾಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿದುಬರುವ ಕಾಳಿ ನದಿಯನ್ನು ಲಕ್ಷಾಂತರ ಜನರು ಅವಲಂಬಿಸಿದ್ದು, ಮೀನುಗಾರಿಕೆಗೂ ಆಧಾರವಾಗಿದೆ. ಅದೆಷ್ಟೋ ಜಲಚರ, ಜೀವ-ಜಂತುಗಳಿಗೂ ನದಿ ಜೀವನಾಡಿ. ಇಂತಹ ಕಾಳಿ ನದಿಯಿಂದ ಈಗಾಗಲೇ ದಾಂಡೇಲಿಯಿಂದ ಧಾರವಾಡದ ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಮತ್ತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕಾಳಿ ನದಿಯಿಂದ ನೀರು ಪೂರೈಸುವ ಯೋಜನೆಯನ್ನು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವುದು ಉತ್ತರಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲೇ ಸಾಕಷ್ಟು ಭಾಗಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿದ್ದು, ಕಾಳಿ ನದಿಯಿಂದ ನೀರು ಪೂರೈಕೆ ಮಾಡಬೇಕೆನ್ನುವ ಬೇಡಿಕೆಯಿದೆ. ಹೀಗಿರುವಾಗ ಜಿಲ್ಲೆಗೇ ಸಿಗದ ನೀರು ಹೊರಜಿಲ್ಲೆಗಳಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ಕಾಳಿ ನದಿ ನೀರು ಹರಿಸುವ ತೆರೆಮರೆಯ ಪ್ರಯತ್ನ ಆರೋಪ: ಸ್ಥಳೀಯರ ಆಕ್ರೋಶ
ಕಾಳಿ ನದಿ ಹುಟ್ಟುವ ಜೋಯಿಡಾ ತಾಲೂಕಿನ ಹಲವು ಹಳ್ಳಿಗಳಲ್ಲಿ ಈಗಲೂ ನೀರಿನ ತತ್ವಾರ ಇದೆ. ಈ ನದಿ ಸಮುದ್ರ ಸೇರುವ ಕಾರವಾರ, ಅಂಕೋಲಾ ತಾಲೂಕುಗಳಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಏಷ್ಯಾದ ಅತಿದೊಡ್ಡ ಯೋಜನೆ ಸೀಬರ್ಡ್ ನೌಕಾನೆಲೆಗೆ ಅಘನಾಶಿನಿಯಿಂದ ನೀರು ಪೂರೈಕೆಯಾಗುವ ಕಾರಣ ಕಾರವಾರ, ಅಂಕೋಲಾ ತಾಲೂಕುಗಳಿಗೆ ನೀರು ಸಿಗುತ್ತಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಸೀಬರ್ಡ್ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನಷ್ಟು ನೀರಿನ ಅಭಾವ ಕೂಡ ಸೃಷ್ಟಿಯಾಗಲಿದೆ. ಇವೆಲ್ಲದರ ನಡುವೆ ಏಕಾಏಕಿ ಐದು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಪ್ರಸ್ತಾಪವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ ರೂಪಾಲಿ ನಾಯ್ಕ, ಕಾಳಿ ನದಿಯಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು 119 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಕಾಮಗಾರಿ ಪ್ರಾರಂಭವಾಗಿದೆ. ಈ ನಡುವೆ ಉತ್ತರ ಕರ್ನಾಟಕಕ್ಕೆ ನೀರು ಪೂರೈಕೆಯ ಯೋಜನೆಗೆ ವಿರೋಧ ವ್ಯಕ್ತವಾಗಿರುವುದರ ಕುರಿತು ಸ್ಥಳೀಯರೊಂದಿಗೆ ಚರ್ಚೆ ನಡೆಸೋದಾಗಿ ತಿಳಿಸಿದ್ದಾರೆ.
ದೀಪದ ಬುಡದಲ್ಲೇ ಕತ್ತಲೆ ಎನ್ನುವಂತೆ ಕಾಳಿ ನದಿಯಿಂದ ಜಿಲ್ಲೆಗೇ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗಕ್ಕೆ ನೀರು ಪೂರೈಸಲು ಸರ್ಕಾರ ಯೋಜನೆ ಘೋಷಿಸಿರೋದು ನಿಜಕ್ಕೂ ದುರಂತ. ಈ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮನವರಿಗೆ ಮಾಡಬೇಕಾದ ಅಗತ್ಯವಿದ್ದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಲಿದೆ ಎಂದು ಇಲ್ಲಿನ ಮಂದಿ ತಿಳಿಸಿದ್ದಾರೆ.