ಭಟ್ಕಳ: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐವರು ಆರೋಪಿಗಳಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಭಟ್ಕಳ ನಗರ ಠಾಣೆಯ ಸಂದೀಪ ವೆಂಕಟ್ರಮಣ ಪಟಗಾರ ಹಲ್ಲೆಗೊಳಗಾದ ಪೊಲೀಸ್ ಕಾನ್ಸ್ಟೇಬಲ್. ಸಂದೀಪ ಅವರು ರಾತ್ರಿ ಪಟ್ಟಣದ ಚೌಥನಿಯ ಕುದುರೆ ಬೀರಪ್ಪ ದೇವಸ್ಥಾನ ಹತ್ತಿರ ಕರ್ತವ್ಯ ನಿರ್ವಹಿಸುವಾಗ ಪಟ್ಟಣದ ಚೌಥನಿಯ ವಿನಾಯಕ ನಾಯ್ಕ, ಶಿವಾನಂದ ನಾಯ್ಕ, ಸುರೇಶ ನಾಯ್ಕ, ಕೃಷ್ಣಾ ನಾಯ್ಕ ಹಾಗೂ ಹಾಡುವಳ್ಳಿಯ ಹಸ್ರವಳ್ಳಿಯ ರಾಘವೇಂದ್ರ ನಾಯ್ಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಸಂದೀಪ ಅವರು ಆರೋಪಿಗಳಿಗೆ ಇಷ್ಟು ತಡರಾತ್ರಿ ಏನು ಮಾಡುತ್ತಿದ್ದಿರಿ ಎಂದು ವಿಚಾರಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಆರೋಪಿಗಳು ಅವಾಚ್ಯವಾಗಿ ಮಾತನಾಡಿದ್ದಾರೆ. ನಂತರ ಸಂದೀಪ ಅವರನ್ನು ಇಬ್ಬರು ಹಿಂಬದಿಯಿಂದ ಹಿಡಿದುಕೊಂಡು ಮುಷ್ಟಿ ಮಾಡಿ ಮೈ, ಮುಖಕ್ಕೆ ಹೊಡೆದು ನಂತರ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಾನಂದ ನಾಯ್ಕ, ಸುರೇಶ ನಾಯ್ಕ, ಕೃಷ್ಣಾ ನಾಯ್ಕ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.