ಕಾರವಾರ: ಕರಾವಳಿಯ ಜನರಿಗೆ ಮೀನು ಒಂದು ಪ್ರಮುಖ ಆಹಾರ. ಪ್ರತಿನಿತ್ಯದ ಆಹಾರವಾಗಿ ಮೀನಿನ ಖಾದ್ಯದ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಮಳೆಗಾಲದ ಅವಧಿಯಲ್ಲಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳುವುದರಿಂದ ಮಾರುಕಟ್ಟೆಯಲ್ಲಿ ಹಸಿಮೀನು ಲಭ್ಯವಾಗುವುದಿಲ್ಲ. ಹೀಗಾಗಿ ಮಳೆಗಾಲದ ಬಳಕೆಗಾಗಿ ಒಣಮೀನನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸಾಮಾನ್ಯ. ಇನ್ನೇನು ಮಳೆಗಾಲ ಎದುರಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಒಣಮೀನಿನ ಮಾರಾಟ ಜೋರಾಗಿದೆ.
ಒಂದೆಡೆ ಬುಟ್ಟಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಬಗೆ ಬಗೆಯ ಒಣ ಮೀನುಗಳು, ಮತ್ತೊಂದೆಡೆ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಕಸರತ್ತು ಮಾಡುತ್ತಿರುವ ಮೀನುಗಾರ ಮಹಿಳೆಯರು. ಇನ್ನೊಂದೆಡೆ ಅಗತ್ಯವಿರುವಷ್ಟು ಒಣ ಮೀನು ಖರೀದಿಯಲ್ಲಿ ಮಗ್ನರಾಗಿರುವ ಗ್ರಾಹಕರು. ಈ ದೃಶ್ಯಗಳು ಕಂಡುಬಂದಿದ್ದು ಕರಾವಳಿ ಜಿಲ್ಲೆ ಉತ್ತರಕನ್ನಡದ ಕಾರವಾರದಲ್ಲಿ.
ಇನ್ನೇನು ಮಳೆಗಾಲ ಪ್ರಾರಂಭಕ್ಕೆ ಕೆಲವೇ ದಿನಗಳು ಉಳಿದಿದೆ. ಆದರೆ ಈ ನಡುವೆ ಕರಾವಳಿಯಲ್ಲಿ ಅಸಾನಿ ಚಂಡಮಾರುತದ ಪರಿಣಾಮ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಹಸಿಮೀನಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಒಣಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಒಣಮೀನಿನ ವ್ಯಾಪಾರ ಚುರುಕು ಪಡೆದುಕೊಂಡಿದೆ.
ಕಾರವಾರದ ಒಣಮೀನಿಗೆ ಬೇಡಿಕೆ: ಕಾರವಾರದ ಒಣಮೀನಿಗೆ ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಗಳಲ್ಲೂ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಮಳೆಗಾಲ ಪ್ರಾರಂಭಕ್ಕೂ ಮುನ್ನ ನಗರದ ಸಂಡೇ ಮಾರುಕಟ್ಟೆಯಲ್ಲಿ ಸಿಗುವ ಒಣಮೀನು ಖರೀದಿಗೆ ಜನರು ಮುಗಿಬೀಳುತ್ತಾರೆ. ಅದರಲ್ಲೂ ಕಾರವಾರದಲ್ಲಿ ಸಿಗುವ ಒಣಮೀನು ಉತ್ತಮ ಗುಣಮಟ್ಟದ್ದಾಗಿರುವ ಜೊತೆಗೆ ಬೆಲೆ ಸಹ ಕಡಿಮೆಯಿರುತ್ತದೆ. ಹೀಗಾಗಿ ಕೇವಲ ಕಾರವಾರಿಗರಲ್ಲದೇ ಮುಂಬೈ, ಬೆಂಗಳೂರು, ಪುಣೆ, ಗೋವಾದಿಂದ ಸಹ ಗ್ರಾಹಕರು ಆಗಮಿಸಿ ಒಣ ಮೀನನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ.
ಮಳೆಗಾಲಕ್ಕೆ ಒಣಮೀನು: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ಬಂದ್ ಆಗುವುದರಿಂದ ಹಸಿ ಮೀನು ಲಭ್ಯತೆ ಕಡಿಮೆಯಿದೆ. ಅಲ್ಲದೇ ಒಣಮೀನು ಸುಮಾರು 6 ತಿಂಗಳಿನಿಂದ ವರ್ಷದವರೆಗೆ ಬಾಳಿಕೆ ಬರುವುದರಿಂದ ಜನರು ತಿಂಗಳುಗಟ್ಟಲೆ ಸಾಕಾಗುವಷ್ಟು ಒಣ ಮೀನನ್ನು ಇದೀಗ ಖರೀದಿಸುತ್ತಿದ್ದಾರೆ. ಇದಲ್ಲದೇ ಮಳೆಗಾಲದಲ್ಲಿ ತರಕಾರಿ ಬೆಲೆ ಸಹ ಗಗನಕ್ಕೇರುವುದರಿಂದ ಒಣಮೀನು ಬಳಕೆಗೆ ಉಪಯೋಗವಾಗುತ್ತದೆ ಎಂದು ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾರೆ ಗ್ರಾಹಕರು.
ಪ್ರತಿವರ್ಷ ಮೇ ಅಂತ್ಯ ಹಾಗೂ ಜೂನ್ ಪ್ರಾರಂಭದಲ್ಲಿ ಕಾರವಾರದ ಮಾರುಕಟ್ಟೆಯಲ್ಲಿ ಒಣಮೀನು ಮಾರಾಟ ಜೋರಾಗಿರುತ್ತದೆ. ಲಕ್ಷಾಂತರ ರೂಪಾಯಿ ಒಣಮೀನಿನ ವ್ಯವಹಾರ ಮಾರುಕಟ್ಟೆಯಲ್ಲಿ ನಡೆಯುತ್ತದೆ. ಕಾರವಾರ ಸುತ್ತಮುತ್ತಲಿನ ನೂರಾರು ಮಹಿಳೆಯರು ಈ ಒಣಮೀನಿನ ಮಾರಾಟದಲ್ಲಿ ತೊಡಗುತ್ತಾರೆ. ಬೇಸಿಗೆಯಲ್ಲಿ ಮೀನಿಗೆ ಉಪ್ಪನ್ನ ಬೆರೆಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿರುತ್ತಾರೆ. ನಂತರ ಈ ಸಂದರ್ಭದಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ.
ಒಂದಲ್ಲ, ಎರಡಲ್ಲ.. ತರಹೇವಾರಿ ಒಣಮೀನು: ಬಂಗಡೆ, ಸೀಗಡಿ, ತೊರಕೆ, ತೋರಿ, ಪೇಡಿ, ಬಣಗು, ಸೊರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬಗೆಯ ಒಣಮೀನುಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕೇವಲ ಮಳೆಗಾಲ ಪ್ರಾರಂಭವಾಗುವ ಮುನ್ನ ಮಾತ್ರ ಒಣಮೀನು ಹೆಚ್ಚು ವ್ಯಾಪಾರವಾಗುತ್ತದೆ. ಮಳೆ ಪ್ರಾರಂಭವಾದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಏರಿಕೆಯಾಗಿದ್ದು, ಮೀನುಗಾರಿಕೆ ನಡೆಸುವುದೇ ಕಷ್ಟಕರವಾಗಿದ್ದು, ಒಣ ಮೀನು ತಯಾರಿಕೆ ದುಬಾರಿಯಾಗಿದೆ. ಆದರೆ ದರ ಹೆಚ್ಚು ಮಾಡಿದರೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕುವುದರಿಂದಾಗಿ ದರ ನಿಗದಿ ಮಾಡೋದೇ ಕಷ್ಟಕರವಾಗಿದೆ ಅಂತಾರೆ ವ್ಯಾಪಾರಸ್ಥರು.
ಒಟ್ಟಿನಲ್ಲಿ ಅಸಾನಿ ಚಂಡಮಾರುತ ಹಿನ್ನೆಲೆ ಮಾರುಕಟ್ಟೆಯಲ್ಲಿ ಹಸಿಮೀನು ದುಬಾರಿಯಾದ ಬೆನ್ನಲ್ಲೇ ಮಳೆಗಾಲದ ಸಂಗ್ರಹಕ್ಕಾಗಿ ಜನರು ಒಣಮೀನಿನತ್ತ ಮುಖಮಾಡಿದ್ದಂತೂ ಸತ್ಯ. ದರ ಕೊಂಚ ಹೆಚ್ಚು ಕಡಿಮೆಯಾದರೂ ಒಣಮೀನಿನ ವ್ಯಾಪಾರ ಜೋರಾಗಿರೋದು ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್: ಅವಧಿಗೂ ಮೊದಲೇ ಮೀನುಗಾರಿಕೆ ಬಂದ್!