ಶಿರಸಿ: ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಗಾದೆಯೊಂದಿದೆ. ಅದರಂತೆ ಮನುಷ್ಯರೇ ಇರಲಿ ಅಥವಾ ಪ್ರಾಣಿಗಳೇ ಇರಲಿ, ಹುಟ್ಟಿದ ಯಾವುದೇ ಮಗುವಾದರೂ ಕೂಡ ತಾಯಿಯ ಮಮತೆ ಆ ಮಗುವಿಗೆ ಮುಖ್ಯವಾಗಿರುತ್ತೆ. ಆದರೆ ಹುಟ್ಟಿದ ಎರಡೇ ದಿನಕ್ಕೆ ತಾಯಿಯನ್ನ ಕಳೆದುಕೊಂಡ ಕರುವೊಂದು ಮನೆಯ ಜನರ ಜೊತೆ ತಾಯಿ ಪ್ರೀತಿಯನ್ನ ಕಂಡುಕೊಂಡು ಮನೆಯವರ ಜೊತೆ ಮನೆಮಗಳಾಗಿ ಮನೆಯಲ್ಲೇ ವಾಸಿಸುತ್ತಿರೋ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮನೆಯೊಂದರಲ್ಲಿ ಕಾಣ ಸಿಗುತ್ತದೆ.
ಸಿದ್ದಾಪುರ ತಾಲೂಕಿನ ಬಾಳೂರಿನ ಮಂಜುನಾಥ್ ಭಟ್ ಅನ್ನೋರ ಮನೆಯ ಪುಟ್ಟ ಕರುವಿನ ಕಹಾನಿ ನೋಡಲು ಎಲ್ಲರಿಗೂ ಬಲುಚಂದ. ಈ ಮನೆಯ ಹಸುವೊಂದು ಕರು ಹಾಕಿ ಕೇವಲ ಎರಡೇ ದಿನಗಳಲ್ಲಿ ತೀರಿಕೊಂಡಿತು. ಆಗಷ್ಟೇ ಜನಿಸಿದ್ದ ಕರು ತಾಯಿಯ ಮಮತೆಯಿಂದ ದೂರವಾಗೋ ಸಂದರ್ಭ ಬಂದೊದಗಿತು. ಇದನ್ನು ಕಂಡ ಮನೆಯವರು ಆ ಕರುವಿಗೆ ತಾಯಿಯ ಮಮತೆ ಕೊರತೆ ಆಗಬಾರದು ಅನ್ನೋ ಕಾರಣಕ್ಕೆ ಆ ಕರುವನ್ನ ಮನೆಯ ಮಗಳಂತೆ ಸಾಕೋಕೆ ನಿರ್ಧರಿಸಿದರು.
ಮನೆಯ ಒಬ್ಬ ಸದಸ್ಯಳಾಗಿ ಮನೆ ಮಾತು
ಅಂದಿನಿಂದ ಈ ಮುದ್ದಾದ ಪುಟ್ಟ ಕರು ಮನೆಯ ಓರ್ವ ಸದಸ್ಯಳಾಗಿ ಮನೆಯಲ್ಲಿದೆ. ಈ ಕರುವಿಗೆ ಮನೆಯೇ ಕೊಟ್ಟಿಗೆ. ಮನುಷ್ಯರು ಸೇವಿಸೋ ಆಹಾರವೇ ಇದಕ್ಕೆ ತಿಂಡಿ. ಯಜಮಾನನ ಹಾಸಿಗೆಯೇ ಈ ಕರುವಿನ ಮಲಗೋ ಜಾಗ. ಈ ಕರು ತಾಯಿಯ ಹೊಟ್ಟೆಯಲ್ಲಿದ್ದಾಗ್ಲೇ ಇದಕ್ಕೆ ಆದ್ಯಾ ಅನ್ನೋ ಹೆಸರಿಟ್ಟಿದ್ದಾರೆ ಮನೆಯವ್ರು.
ಈ ಪುಟ್ಟ ಕರು ಗೀರ್ ತಳಿಗೆ ಸೇರಿದ ಹಸುವಾಗಿದ್ದು, ಬೇರೆ ಹಾಲು ಕುಡಿಸಿದ್ದರ ಪರಿಣಾಮವಾಗಿ ಕರುವಿನ ಕೂದಲು ಉದುರಲಾರಂಭಿಸಿತು. ಇದನ್ನು ನೋಡಿದ ಮನೆಯವರು ವೈದ್ಯರನ್ನು ಸಂಪರ್ಕಿಸಿ ಔಷಧವನ್ನ ಮಾಡಿದರು. ಈ ಕರು ವಾಸಿಸೋದು ಕೂಡ ಮನೆಯಲ್ಲೇ. ಮನೆಯ ತುಂಬೆಲ್ಲಾ ಮನುಷ್ಯರು ಓಡಾಡಿದಂತೆ ಓಡಾಡುತ್ತಿರುತ್ತದೆ. ಬೆಳಗ್ಗೆ ಅಡುಗೆ ಮನೆಯಲ್ಲಿ ತಿಂಡಿ ಮಾಡೋವಾಗ ಅಲ್ಲಿಯೇ ಬಂದು ಕುಳಿತುಕೊಳ್ಳೋ ಈ ಕರು, ಮಲಗೋದು ಕೂಡ ಮನೆಯ ಯಜಮಾನನ ಜೊತೆ.
ಮನುಷ್ಯರಂತೆಯೇ ವರ್ತಿಸುತ್ತಿರುವ ಕರು
ಯಾರೂ ಗಮನಿಸದಿದ್ದರೆ ಮನೆಯಲ್ಲಿರೋ ತರಕಾರಿಗಳನ್ನ ತಿಂದು ಮುಗಿಸಿಬಿಡುತ್ತೆ ಮಲ ಮೂತ್ರಗಳು ಬಂದಾಗ ಮನುಷ್ಯರಂತೆಯೇ ಸೂಚಿಸೋ ಕರುವನ್ನ ಹೊರಗಡೆ ಕರೆದುಕೊಂಡು ಹೋಗಿ ಬರಲಾಗುತ್ತೆ. ಕರುವಿಗೆ ಸ್ನಾನವನ್ನ ಕೂಡ ಬಚ್ಚಲು ಮನೆಯಲ್ಲೇ ಮಾಡಿಸಲಾಗುತ್ತೆ.
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ರೆ ಮನುಷ್ಯರಂತೆಯೇ ಈ ಕರು ಅಳುತ್ತೆ. ಕಟ್ಟಿ ಹಾಕಿದ ಹಗ್ಗವನ್ನ ಎಳೆದುಕೊಂಡು ಬರುತ್ತೆ. ಆದ್ದರಿಂದ ಕರುವನ್ನ ಮನೆಯಲ್ಲೇ ಸಾಕಲಾಗುತ್ತಿದೆ. ಈ ಆದ್ಯಾ ಅಂದರೆ ಮನೆಯವರಿಗೆಲ್ಲರಿಗೂ ಅಚ್ಚುಮೆಚ್ಚು. ಮನೆಯ ಮಕ್ಕಳಂತೂ ಈ ಕರುವನ್ನ ತುಂಬಾ ಹಚ್ಚಿಕೊಂಡಿದ್ದು, ದಿನವೂ ಇದರ ಜೊತೆ ಆಟ ಆಡೋದು, ಮುದ್ದು ಮಾಡೋದು ಎಲ್ಲಾ ಮಾಡುತ್ತಾರೆ.