ಕಾರವಾರ: ವ್ಯಕ್ತಿಗೆ ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ಕಾರ್ಡ್ ಪಡೆದು ಸಾವಿರಾರು ರೂಪಾಯಿ ಪಂಗನಾಮ ಹಾಕಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಡಗೋಡ ಪಟ್ಟಣದ ಎಸ್ಬಿಐ ಬ್ಯಾಂಕ್ ಎಟಿಎಂ ಬಳಿ ಕಳೆದ ನವೆಂಬರ್ನಲ್ಲಿ ಅಪರಿಚಿತ ವ್ಯಕ್ತಿ ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಯಾಮಾರಿಸಿದ್ದ.
ಎಟಿಎಂನಲ್ಲಿ ಕಾರ್ಡ್ ಹಾಕಿದಾಗ ಹಣ ಬಂದಿರಲಿಲ್ಲ. ಆಗ ಅಲ್ಲೇ ಇದ್ದ ಖದೀಮ, ತಾನು ಹಣ ತೆಗೆದುಕೊಡುವುದಾಗಿ ಹೇಳಿ ಪಾಸ್ವರ್ಡ್ ಕೇಳಿಕೊಂಡು 20 ಸಾವಿರ ರೂಪಾಯಿ ತೆಗೆದುಕೊಂಡು ಎಸ್ಕೇಪ್ ಆಗಿದ್ದ.
ಹಣ ಕಳೆದುಕೊಂಡವರು ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮುಂಡಗೋಡದ ವ್ಯಕ್ತಿಗೆ ಕೊಟ್ಟಿರುವ ಎಟಿಎಂ ಕಾರ್ಡ್ ಬಂಕಾಪುರ ಮಹಿಳೆಗೆ ಸೇರಿದ್ದು ಎನ್ನುವುದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ. ಆ ಮಹಿಳೆಗೂ ಸಹ ಆರೋಪಿ ಇದೇ ರೀತಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಗಿರೀಶ್ ಮುನಿಯಪ್ಪನವರ್ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಹೀರೆಮೊರಬದವನಾಗಿದ್ದಾನೆ. ಈತ ದಾವಣಗೆರೆಯಿಂದ ಬೈಕ್ ಕಳವು ಮಾಡಿ ಅದೇ ಬೈಕ್ನಲ್ಲಿ ಮುಂಡಗೋಡಕ್ಕೂ ಬಂದಿದ್ದ. ಈತ ಮಂಡ್ಯ, ತೂಮಕೂರು ಜಿಲ್ಲೆಯಲ್ಲಿಯೂ ಅನೇಕರಿಗೆ ಎಟಿಎಂ ಕಾರ್ಡ್ ಪಡೆದು ವಂಚನೆ ಮಾಡಿದ್ದಾನೆ ಅನ್ನೋದು ತಿಳಿದು ಬಂದಿದೆ.